ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಜಯ: ಭಾರತ ಶುಭಾರಂಭ

0
4

ವಡೋದರಾ: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 2026ರ ಕ್ಯಾಲೆಂಡರ್‌ ವರ್ಷದಲ್ಲಿ ಶುಭಾರಂಭ ಮಾಡಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದು, ಟಾಸ್‌ ಗೆದ್ದು ಭಾರತ ಬೌಲಿಂಗ್‌ ಆಯ್ದುಕೊಂಡಿತ್ತು.

ನಿಗದಿತ 50 ಓವರ್‌ಗಳಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ ನಷ್ಟಕ್ಕೆ 300 ರನ್‌ಗಳನ್ನು ಕಲೆ ಹಾಕಿತ್ತು. ಆರಂಭಿಕರಾದ ಡೆವೊನ್ ಕಾನ್ವೇ (56) ಮತ್ತು ಹೆನ್ರಿ ನಿಕೋಲ್ಸ್ (62) ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟಿತು.

ಡೇರಿಲ್ ಮಿಚೆಲ್ 71 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ ಸೇರಿದಂತೆ 84 ರನ್‌ಗಳಿಸಿ ತಂಡವನ್ನು ಹೆಚ್ಚಿಸಲು ನೆರವಾದರು. ಆದರೆ, ಮಿಚೆಲ್‌ ಜತೆ ಯಾವೊಬ್ಬ ಆಟಗಾರ ಸರಿಯಾದ ಸಾಥ್‌ ನೀಡಲಿಲ್ಲ.

ನ್ಯೂಜಿಲೆಂಡ್‌ ನೀಡಿದ 301 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಶುಭ್ಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ ಜೋಡಿ ಉತ್ತಮ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು.

ಶುಭ್ಮನ್‌ ಗಿಲ್‌ 71 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ ಒಳಗೊಂಡಂತೆ 56 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ಆಗ ತಂಡದ ಮೊತ್ತ 26.3 ಓವರ್‌ಗಳಲ್ಲಿ 157 ರನ್‌ ಆಗಿತ್ತು.

ಶತಕ ವಂಚಿತ ಕೊಹ್ಲಿ: ಅತ್ಯುತ್ತಮವಾಗಿ ಬ್ಯಾಟ್‌ ಬೀಸಿದ ವಿರಾಟ್‌ ಕೊಹ್ಲಿ ಮತ್ತೆ ಶತಕ ಸಿಡಿಸುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಿದರು. 91 ಎಸೆತದಲ್ಲಿ 8 ಬೌಂಡರಿ, 1 ಸಿಕ್ಸರ್‌ ಸೇರಿ 93 ರನ್‌ಗಳಿಸಿದ್ದ ವಿರಾಟ್‌, ಜೇಮಿಸನ್ ಎಸೆತದಲ್ಲಿ ಮೈಕೆಲ್ ಬ್ರೇಸ್‌ವೆಲ್ ಕ್ಯಾಚ್‌ ನೀಡಿ ಔಟಾದರು. ಈ ಮೂಲಕ ಕೇವಲ 7 ರನ್‌ಗಳಿಂದ ಶತಕ ವಂಚಿತರಾದರು. ಆದರೆ ಜೇಮಿಸನ್, ಶ್ರೇಯಸ್‌ ಅಯ್ಯರ್‌ ಅವರನ್ನು ಕೂಡ 49 ರನ್‌ಗೆ ಔಟ ಮಾಡಿ ಅರ್ಧಶತಕದಿಂದ ವಂಚಿತರನ್ನಾಗಿಸಿದರು.

ಅಂತಿಮವಾಗಿ ಭಾರತ 49 ಓವರ್‌ಗಳಲ್ಲಿ 6 ವಿಕಟ್‌ ಕಳೆದುಕೊಂಡು ಗಲುವಿನ ನಗೆ ಬೀರಿತು.

Previous articleಬಳ್ಳಾರಿ ಬ್ಯಾನರ್‌ ಗಲಾಟೆ: ಸಿಐಡಿಗೆ ನಾಲ್ಕು ಕೇಸ್‌ಫೈಲ್ ಹಸ್ತಾಂತರ