ಸರ್ಕಾರ ಪೊಲೀಸ್ ಇಲಾಖೆ ನೈತಿಕತೆ ಕುಸಿಯುವಂತೆ ಮಾಡಿದೆ

0
26

ಬೆಂಗಳೂರು: ದೇಶದಲ್ಲಿ ಎರಡು ರೀತಿಯ ಕಾಂಗ್ರೆಸ್ ಇದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಕಾಂಗ್ರೆಸ್ ಇತ್ತು. ಈಗ ಜನ ವಿರೋಧಿ, ದೇಶ ವಿರೋಧಿ ಕಾಂಗ್ರೆಸ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದ ಶತಮಾನೋತ್ಸವವನ್ನು ಕಾಂಗ್ರೆಸ್ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಈಗಿನದು ಜನ ವಿರೋಧಿ, ಮತ್ತು ದೇಶ ವಿರೋಧಿ ಕಾಂಗ್ರೆಸ್ ಆಗಿದೆ ಎಂದು ಹೇಳಿದರು.
ಈ ಸರ್ಕಾರ ಸಂಪೂರ್ಣ ಪೊಲಿಸ್ ಇಲಾಖೆಯ ನೈತಿಕತೆ ಕುಸಿಯುವಂತೆ ಮಾಡಿದೆ. ಹಿರಿಯ ಅಧಿಕಾರಿಗಳು ಕಾನ್ಸ್ ಟೇಬಲ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಯಾರು ನ್ಯಾಯ ಸಮ್ಮತವಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಶಿಕ್ಷೆ ಕೊಡಲಾಗುತ್ತಿದೆ. ಪೊಲಿಸರು ಕಾನೂನಿಗೆ ನಿಷ್ಠೆ ಇರಬೇಕು. ಕಾಂಗ್ರೆಸ್ ನವರಿಗೆ ತಮಗೆ ನಿಷ್ಠೆ ಇರುವ ಪೊಲೀಸ್ ಅಧಿಕಾರಿಗಳು ಬೇಕಾಗಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯನ್ನು ಪಕ್ಷಗಳ ಆಧಾರದಲ್ಲಿ ವಿಭಜಿಸುವಂತದ್ದು, ಯುನಿಫಾರ್ಮ್‌ನಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ನೀಡುವುದರಿಂದ ಅವರ ನೈತಿಕತೆ ಕುಸಿಯುತ್ತಿದೆ. ತಕ್ಷಣವೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ದುರಾಡಳಿತ ಮಿತಿಮೀರಿದೆ
ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರ ದುರಾಡಳಿತ ಮಿತಿ ಮೀರುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎನ್ನುವ ಕನಿಷ್ಠ ಜ್ಞಾನ ಇವರಿಗೆ ಇಲ್ಲ ಎಂದರೆ, ಇವರು ನೂರನೇ ವರ್ಷಾಚರಣೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಹಲವಾರು ಶಾಕ್
ಕಲಬುರ್ಗಿಯಲ್ಲಿ ಮಹಿಳೆಗೆ ರಸ್ತೆಯಲ್ಲಿ ವಿದ್ಯುತ್ ಶಾಕ್ ಹೊಡೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಕೇವಲ ವಿದ್ಯುತ್ ಶಾಕ್ ಅಷ್ಟೇ ಅಲ್ಲ ಹಲವಾರು ಶಾಕ್ ಗಳನ್ನು ಕೊಟ್ಟಿದೆ. ಬಾಣಂತಿಯರಿಗೆ ಕಪ್ಪು ಪಟ್ಟಿಗೆ ಸೇರಿದ ಕಂಪನಿ ಸರಬರಾಜು ಮಾಡಿರುವ ಅವಧಿ ಮೀರಿದ ಔಷಧಗಳನ್ನು ನೀಡಿ ಶಾಕ್ ಕೊಟ್ಟಿದೆ. ಇದು ಈ ಸರ್ಕಾರದಲ್ಲಿ ಸಾಮಾನ್ಯ ಜನರು ಸುರಕ್ಷಿತವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಕಾನೂನು ಸುವ್ಯವಸ್ಥೆ, ರಸ್ತೆ, ಕುಡಿಯುವ ನೀರು, ಆರೋಗ್ಯ, ವಿದ್ಯುತ್ ಯಾವ ವಿಚಾರದಲ್ಲಿಯೂ ಜನರು ಸುರಕ್ಷಿತವಾಗಿಲ್ಲ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದರ ಕುರಿತು ಮಾತನಾಡಿದ ಅವರು, ಅಂಬೇಡ್ಕರ್ ವಿಚಾರದಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಬಣ್ಣ ಬಯಲಾಗಿದೆ‌. ಹೀಗಾಗಿ ಅದನ್ನು ಮುಚ್ಚಿಕೊಳ್ಳಲು ಈ ರೀತಿಯ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.

Previous articleಜಮ್ಮುವಿನಲ್ಲಿ ಸೇನಾ ಟ್ರಕ್ ದುರಂತ: ಬೀಜಾಡಿಯ ಯೋಧ ಹುತಾತ್ಮ
Next articleಶಿವಗಂಗಾ ಬಸವರಾಜ್ ಒಬ್ಬ ಮಾನಸಿಕ ಅಸ್ವಸ್ಥ