ಯುವ ಜೋಡಿ ಹೇಳಿದರೂ ಪೊಲೀಸರು ಮಾಡಿದ್ದೇ ಬೇರೆ!

0
15

ಬಳ್ಳಾರಿ: ಅವರಿಬ್ಬರು ಕಾಲೇಜಿನಲ್ಲಿಯೇ ಒಬ್ಬರಿಗೊಬ್ಬರು ಮನಸ್ಸು ಹಂಚಿಕೊಂಡರು. ಒಂದಾಗಿ ಬಾಳಲು ನಿರ್ಧರಿಸಿದರು. ಅದರಂತೆ ಕಾನೂನು ಪ್ರಕಾರ ವಯಸ್ಸು ಮದುವೆಗೆ ಅರ್ಹ ಆಗುವ ತನಕ ಕಾದು ಮದುವೆ ಆಗಿ ನೋಂದಣಿ ಸಹ ಮಾಡಿಸಿದರು. ಇನ್ನೇನು ನಮ್ಮ ಬದುಕು ನಿರಾಳ ಎಂದು ಭಾವಿಸಿ, ನಿತ್ಯ ಬದುಕಿನ ಸುಂದರ ಕನಸು ಕಟ್ಟಿಕೊಳ್ಳಬೇಕೆನಿಸುವಷ್ಟರಲ್ಲಿ ಏಕಾಏಕಿ ಯುವತಿ ಕಾಣೆಯಾದ ದೂರಿನ ಕಾರಣಕ್ಕೆ ಪೊಲೀಸರ ಮಧ್ಯ ಪ್ರವೇಶವಾಗಿದೆ.
ಈ ಇಬ್ಬರ ಸುಂದರ ಬದುಕಿಗೂ ಅಡ್ಡಿಯಾಗಿದ್ದು ಜಾತಿ ವಿಷಯವಂತೆ. ಕಾರ್ತಿಕ್ ಎಂಬ ಬಳ್ಳಾರಿ ಹುಡುಗ ಸಿರುಗುಪ್ಪ ತಾಲೂಕು ಶಾನವಾಸಪುರದ ಹುಡುಗಿಯನ್ನು ಪ್ರೀತಿಸಿ, ವರಿಸಿದ. ಆದರೆ ಹುಡುಗಿ ಕಾಣೆ ಎಂಬ ದೂರೊಂದು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದಾಖಲಾಗುತ್ತದೆ. ಆಗ ಕಾರ್ಯೋನ್ಮುಖರಾದ ಪೊಲೀಸರು ಹರಪನಹಳ್ಳಿ ಬಳಿಯ ಹಳ್ಳಿಯೊಂದರಲ್ಲಿ ಇದ್ದ ಈ ಜೋಡಿಯನ್ನು ಪತ್ತೆಮಾಡಿ ವಾರ್ನಿಂಗ್ ನೀಡಿದರೆನ್ನಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ನಮ್ಮನ್ನು ಕರೆಯಿಸಿ, ನಿಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಿ ಎಂದು ಯುವ ಜೋಡಿ ಹೇಳಿದರೂ ಪೊಲೀಸರು ಮಾಡಿದ್ದೇ ಬೇರೆ!
ಪೊಲೀಸರು ಈ ಇಬ್ಬರು ಬರುತ್ತಲೇ ಹುಡುಗಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸುತ್ತಾರೆ. ಪ್ರೇಮಿ ಕಾರ್ತಿಕ್‌ಗೆ `ನಿನಗೆ ಜೀವ ಭಯ ಇದೆ. ನಾವು ಏನೂ ಮಾಡಲು ಆಗಲ್ಲ. ಹಾಗಾಗಿ ನೀನು ಕೆಲ ದಿನ ಸುಮ್ಮನಿರು’ ಎಂದು ಹೇಳುತ್ತಾರೆ. ಪೊಲೀಸರು ತಮ್ಮಿಬ್ಬರನ್ನು ಒಂದು ಮಾಡುತ್ತಾರೆ ಎಂದು ನಂಬಿದ್ದು ಸುಳ್ಳಾಗುತ್ತದೆ.
ಕೊನೆಗೆ ಕಾರ್ತಿಕ್ ಮಾಧ್ಯಮ ಪ್ರತಿನಿಧಿಗಳು, ಸಮಾಜದ ಮುಖಂಡರನ್ನು ಸಂಪರ್ಕಮಾಡಿದಾಗ ಎಚ್ಚೆತ್ತುಕೊಂಡ ಪೊಲೀಸರು ಕಾರ್ತಿಕ್‌ನನ್ನು ಕರೆದು ನಿಮ್ಮಿಬ್ಬರನ್ನು ಒಂದು ಮಾಡುವೆ ಬನ್ನಿ ಎಂದು ಕರೆಯುತ್ತಾರೆ. ಇದನ್ನು ನಂಬಿ ಬಂದ ಕಾರ್ತಿಕ್‌ನನ್ನು ದಿನವಿಡೀ ಕಾಯಿಸಿದ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಅವರು ಕೊನೆಗೆ ಒಂದು ಪತ್ರ ಕೊಟ್ಟು ಕೌಲ್ ಬಜಾರ್ ಪೊಲೀಸ್ ಠಾಣೆಗೆ ಹೋಗಿ, ಸಂಜೆ ೬ ಗಂಟೆ ವೇಳೆಗೆ ನಿಮ್ಮ ಪತ್ನಿ ನಿಮ್ಮ ಜೊತೆ ಬರುವರು. ನೀವು ಸುರಕ್ಷಿತವಾಗಿ ನಿಮ್ಮ ಊರು ತಲುಪಿ ಎಂದರಂತೆ.
ಇಷ್ಟೆಲ್ಲದರ ಮಧ್ಯೆ ಕಾರ್ತಿಕ್ ಪತ್ನಿ ತವರು ಮನೆ ಸೇರುತ್ತಾರೆ!
ಹ್ಞಾಂ! ಸಾಂತ್ವನ ಕೇಂದ್ರದಲ್ಲಿದ್ದ ಕಾರ್ತಿಕ್ ಪತ್ನಿ ಹೋಗಿದ್ದು ಹೇಗೆ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರ ಇಲ್ಲ. ಸಾರ್ ನನ್ನ ಪತ್ನಿಯನ್ನು ನನ್ನ ಜೊತೆ ಕಳುಹಿಸಿ ಎಂದು ಮತ್ತೆ ಎಸ್‌ಪಿ ಬಳಿ ಕಾರ್ತಿಕ್ ಹೋದರೆ ಎಸ್‌ಪಿ ಅವರು “ನೋಡೋಣ” ಎನ್ನುತ್ತಾರೆ. ಅಕೆಯೊಂದಿಗೆ ಮಾತನಾಡಲು ಸಹ ಅವಕಾಶ ಇಲ್ಲದೆ ಹೋಗುತ್ತದೆ.
ಆತನ ಪತ್ನಿ ನಿಜಕ್ಕೂ ಸಾಂತ್ವನ ಕೇಂದ್ರದಿಂದ ತನ್ನಿಷ್ಟದಂತೆ ತವರಿಗೆ ಹೋದಳೋ ಇಲ್ಲವೋ ಎಂಬುಕ್ಕೆ ಉತ್ತರ ಆತನ ಬಳಿ ಇಲ್ಲ!

Previous articleಅಂತ್ಯಕ್ರಿಯೆಗೆ ಸಿಗದ ಜಾಗ
Next articleಶ್ರೀ ಸಾಯಿ ಬಾಬಾರ 105ನೇ ಸಮಾಧಿ ಉತ್ಸವ ಉದ್ಘಾಟನೆ