ಮಹಾತ್ಮ ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಜಾತ್ರೆ

0
14

ಧಾರವಾಡ: ಕಾಂಗ್ರೆಸ್‌ನವರು ಸಾರ್ವಜನಿಕರ ಹಣದಲ್ಲಿ ಬೆಳಗಾವಿಯಲ್ಲಿ ಪಕ್ಷದ ಸಮಾವೇಶ ಆಯೋಜಿಸಿದ್ದು, ಮಹಾತ್ಮ ಗಾಂಧಿ ಹೆಸರಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ಸಮಾವೇಶ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಸರಕಾರದ ಹಣದಲ್ಲಿ ಸಮಾವೇಶ ಮಾಡುತ್ತಿರುವುದು ಸರಿಯಲ್ಲ ಎಂದರು.
ಮಹಾತ್ಮ ಗಾಂಧಿ ಕುಳಿತ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಆದರೆ ಅಂದಿನ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ಹೋಲಿಕೆ ಮಾಡಲಾಗುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಆದರೆ ಪಕ್ಷವನ್ನು ಯಾಕೆ ಕಾಂಗ್ರೆಸ್ ಮುಖಂಡರು ವಿಸರ್ಜಿಸಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ. ಬೆಳಗಾವಿ ಸಮಾವೇಶಕ್ಕೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಯಾಕೆ ಬರುತ್ತಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅವರ ಪಕ್ಷದ ಸಮಾವೇಶಕ್ಕೆ ಬರುವುದು ಅವರಿಗೆ ಬಿಟ್ಟಿದ್ದು ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರೊಬ್ಬರ ಬೆದರಿಕೆಯಿಂದಾಗಿ ಬೀದರಿನಲ್ಲಿ ಗುತ್ತಿಗೆದಾರ ಸಚಿನ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ಮಾಧ್ಯಮದಿಂದ ತಿಳಿದಿದೆ. ಬೆಳಗಾವಿಯಲ್ಲಿಯೂ ಸಚಿವರೊಬ್ಬರ ಆಪ್ತರ ವಿರುದ್ಧವೂ ಗಂಭೀರ ಆರೋಪ ಕೇಳಿಬಂದಿತ್ತು. ಅದನ್ನು ಮುಚ್ಚಿಹಾಕಿದರು. ಇದು ಸರಕಾರದ ನೈತಿಕತೆಯನ್ನು ಬಿಂಬಿಸುತ್ತದೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಸಂಪೂರ್ಣ ಭ್ರಷ್ಟಮಯವಾಗಿದೆ ಎಂದು ಆರೋಪ ಮಾಡಿದರು.
ದೇಶದ ನಕಾಶೆಯನ್ನೇ ಸರಿಪಡಿಸದ ಕಾಂಗ್ರೆಸ್‌ನವರು ದೇಶ ಹೇಗೆ ಸರಿಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ದೇಶದ ನಕಾಶೆಯನ್ನು ತಪ್ಪಾಗಿ ಮುದ್ರಿಸಲಾಗಿದೆ. ಮಾಧ್ಯಮದಲ್ಲಿ ಬಂದ ನಂತರವೂ ನಕಾಶೆಯನ್ನು ಸರಿಪಡಿಸದಿರುವುದು ದುರ್ದೈವದ ಸಂಗತಿ ಎಂದರು.

Previous articleಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ರೈಲು ಸೇವೆ ವಿಸ್ತರಣೆ
Next articleಗೈರಿಗೆ ಕಾರಣ ಕೊಟ್ಟು ಸೋನಿಯಾ ಪತ್ರ..!