ಮನೆ ಒಡೆಯನ ಬುದ್ದಿ ಮನೆಯವರಿಗೆಲ್ಲ…

0
30

ಪ್ರಧಾನಿ ನರೇಂದ್ರ ಮೋದಿಯವರೇ, ಇದು ನಿಮ್ಮ ಸುಳ್ಳಿನಿಂದಲೇ ಪ್ರೇರಣೆ ಪಡೆದು ಹೇಳಿರುವ ಸುಳ್ಳಾಗಿರುವ ಕಾರಣ ದಯವಿಟ್ಟು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಹೇಳಿರುವ ಸುಳ್ಳಿಗಾಗಿ ದೇಶದ ಜನತೆಯ ಕ್ಷಮೆ ಯಾಚಿಸಿ,

ಬೆಂಗಳೂರು: ಮಹಾರಾಷ್ಟ್ರದ ಬಿಜೆಪಿಯು ನಮ್ಮ ಯಶಸ್ವಿ ಗ್ಯಾರಂಟಿ ಯೋಜನೆ ಬಗ್ಗೆ ಅಪ್ಪಟ ಸುಳ್ಳನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಪ್ರಕಟಿಸಿ, ಸಿಕ್ಕಿ ಹಾಕಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ‘‘ಸುಳ್ಳೇ ಬಿಜೆಪಿಯ ಮನೆ ದೇವರು’’ ಎಂದು ನಾವು ಹೇಳುತ್ತಿರುವುದು ಸುಳ್ಳಲ್ಲ. ಮಹಾರಾಷ್ಟ್ರದ ಬಿಜೆಪಿಯು ನಮ್ಮ ಯಶಸ್ವಿ ಗ್ಯಾರಂಟಿ ಯೋಜನೆಯಾಗಿರುವ ‘‘ಗೃಹಲಕ್ಷ್ಮಿ’’ ಬಗ್ಗೆ ಒಂದು ಅಪ್ಪಟ ಸುಳ್ಳನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಪ್ರಕಟಿಸಿ, ಸಿಕ್ಕಿ ಹಾಕಿಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರದೆ ಮೋಸ ಮಾಡಿದೆ ಎನ್ನುವುದು ಬಿಜೆಪಿ ಆರೋಪ.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಇದೇನು ನಮಗೆ ಆಶ್ಚರ್ಯ ಉಂಟುಮಾಡಿಲ್ಲ. ಮನೆ ಒಡೆಯನ ಬುದ್ದಿ ಮನೆಯವರಿಗೆಲ್ಲ ಬಂದಿದೆ. ಹೋದಲ್ಲಿ ಬಂದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳುಗಳನ್ನು ಉದುರಿಸುವ ನಿಮ್ಮಿಂದಲೇ ಪ್ರೇರಣೆ ಪಡೆದು ಮಹಾರಾಷ್ಟ್ರ ಬಿಜೆಪಿ ಇಷ್ಟೊಂದು ನಿರ್ಲಜ್ಜತನದಿಂದ ಈ ಹಸಿಸುಳ್ಳನ್ನು ಪ್ರಕಟಿಸಿದೆ ಎನ್ನುವುದು ನಿಸ್ಸಂಶಯ.
ಗೃಹಲಕ್ಷ್ಮಿ ಯೋಜನೆಯಡಿ 2023ರ ಆಗಸ್ಟ್ ತಿಂಗಳಿನಿಂದ ಈ ವರೆಗೆ 1.22 ಕೋಟಿ ಮನೆಯೊಡತಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಸಂದಾಯವಾಗುತ್ತಿದೆ. ಈ ರೀತಿ ಒಟ್ಟು ₹30,285 ಕೋಟಿ ವರ್ಗಾವಣೆ ಮಾಡಲಾಗಿದೆ. ಅನುಮಾನ ಇದ್ದವರು ಈ 1.22 ಕೋಟಿ ಮನೆ ಒಡತಿಯರನ್ನೇ ಕೇಳಿ ಪರಾಂಬರಿಸಿಕೊಳ್ಳಿ. ಪ್ರಧಾನಿ ನರೇಂದ್ರ ಮೋದಿಯವರೇ, ಇದು ನಿಮ್ಮ ಸುಳ್ಳಿನಿಂದಲೇ ಪ್ರೇರಣೆ ಪಡೆದು ಹೇಳಿರುವ ಸುಳ್ಳಾಗಿರುವ ಕಾರಣ ದಯವಿಟ್ಟು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಹೇಳಿರುವ ಸುಳ್ಳಿಗಾಗಿ ದೇಶದ ಜನತೆಯ ಕ್ಷಮೆ ಯಾಚಿಸಿ, ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಎಂದು ಆಗ್ರಹಿಸುತ್ತೇನೆ. ಮಹಾರಾಷ್ಟ್ರ ಬಿಜೆಪಿ ತಾನು ಪ್ರಕಟಿಸಿರುವ ಸುಳ್ಳಿನ ಜಾಹೀರಾತಿನಷ್ಟೇ ಗಾತ್ರದ ಜಾಹೀರಾತಿನಲ್ಲಿ ಸತ್ಯ ಸಂಗತಿಯನ್ನು ತಿಳಿಸಿ ಅಲ್ಲಿನ ಎಲ್ಲ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ನೋಡಿಕೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ನಮ್ಮ ಸರ್ಕಾರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡಲಿದೆ.

Previous articleನನ್ನ ಮೇಲೆ ಬಿಜೆಪಿಯವರು ಸುಳ್ಳು ಕೇಸ್ ಹಾಕಿಸಿದ್ದಾರೆ…
Next articleವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಸುಸ್ವರಲಯ ಪ್ರಶಸ್ತಿ ಘೋಷಣೆ