ಬೆಳಗಾವಿ: ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಕನ್ನಡಿಗ ಯುವಕರಿಗೆ ಮರಾಠ ಪುಂಡರು ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.
ಛತ್ರಪತಿ ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜವನ್ನು ಹಾಕಿದ್ದಕ್ಕಾಗಿ ಯುವಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣವು ಉದ್ವಿಗ್ನಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಬಳಿ ಅಳವಡಿಸಿದ್ದ ಕನ್ನಡ ಧ್ವಜವನ್ನು ತೆರವು ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿತ್ತು. ಅಳವಡಿಸಿದ್ದ ಧ್ವಜವನ್ನು ತೆರವು ಮಾಡುವಂತೆ ಮರಾಠ ಪುಂಡರು ಕನ್ನಡಿಗರಿಗೆ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲ ಮರಾಠ ಸಮುದಾಯದವರು ಕನ್ನಡಿಗರ ಮೇಲೆ ಹಲ್ಲೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.