ಬಾಗಲಕೋಟೆ: ರೈತ ಚಳವಳಿಯನ್ನು ಬಲಿಷ್ಠಗೊಳಿಸಲು ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಚಿಂತನೆಯಿದ್ದು, ಸದ್ಯದಲ್ಲೇ ಪ್ರಾದೇಶಿಕ ಪಕ್ಷ ಸ್ಥಾಪಿಸಲಾಗುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಘೋಷಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಡಳಿತ ಹಾಗೂ ವಿಪಕ್ಷಗಳು ಅಹಂಕಾರದಿಂದ ಮೆರೆಯುತ್ತಿವೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯ ತೋರುತ್ತಿಲ್ಲ. ಇಂಥ ಬೇಜವಾಬ್ದಾರಿ ಪಕ್ಷಗಳನ್ನು ಅಧಿಕಾರದಿಂದ ಹೊರಗಿಟ್ಟು ರೈತರನ್ನೇ ವಿಧಾನಸೌಧಕ್ಕೆ ಕಳುಹಿಸಲು ಪ್ರಾದೇಶಿಕ ಪಕ್ಷ ಸ್ಥಾಪಿಸಲಾಗುವುದು ಎಂದರು.
ಕಳೆದ ಹತ್ತು ತಿಂಗಳಿನಿಂದ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ. ನಾವು ಜನತಾ ಪ್ರಣಾಳಿಕೆ ಸಿದ್ಧಪಡಿಸಿದ್ದು, ಈ ಆಧಾರದಲ್ಲಿ ಪಕ್ಷ ರೂಪಿಸುತ್ತೇವೆ. ೨೮ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗಿಳಿಯಲಿದ್ದಾರೆ. ಪಕ್ಷದ ಹೆಸರು ಇನ್ನೂ ಅಂತಿಮವಾಗಿಲ್ಲ ಎಂದು ವಿವರಿಸಿದರು.
ಮಂಡ್ಯದ ಜನ ಛತ್ರಿಗಳು ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ದುರದೃಷ್ಟಕರ. ಅವರು ತಮ್ಮ ಹಿನ್ನೆಲೆ ನೋಡಿಕೊಳ್ಳಲಿ. ಹೇಳಿಕೆ ನೀಡುವಾಗ ನೈತಿಕತೆಯಿಂದ ಎಚ್ಚರಿಕೆಯ ಹೇಳಿಕೆ ಕೊಡಬೇಕು. ಮಾ. ೨೨ರಂದು ಬಂದ್‌ಗೆ ನಮ್ಮ ಬೆಂಬಲವಿದೆ, ಆದರೆ ಸಾರಿಗೆ ಸಂಸ್ಥೆ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕೇಸ್ ದಾಖಲಾಗಿ ತನಿಖೆ ನಡೆದಿದೆ. ಬಂದ್ ಕರೆ ನೀಡುವ ಮುನ್ನ ಮುಖಂಡರು ಎಲ್ಲರ ಅಭಿಪ್ರಾಯ ಪಡೆಯಬೇಕಿತ್ತು ಎಂದು ಉತ್ತರಿಸಿದರು.
ಮುಖಂಡರಾದ ಮೋಹನರಾಜ, ಪುಟ್ಟರಾಜು, ವೀರಭದ್ರಸ್ವಾಮಿ, ಹಣಮಂತಪ್ಪ ಇದ್ದರು.