ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಸಂಸ್ಕಾರ ಮಂಡ್ಯ ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ನೆರವೇರಿತು. ಒಕ್ಕಲಿಗ ಸಂಪ್ರದಾಯದ ಪ್ರಕಾರ ಅವರ ಅಂತ್ಯಸಂಸ್ಕಾರ ನಡೆಯಿತು.
ಸೋಮನಹಳ್ಳಿಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಸೇರಿದಂತೆ ಗಣ್ಯರು, ಸಾರ್ವಜನಿಕರು, ಅಂತಿಮ ದರ್ಶನ ಪಡೆದು, ಕಣ್ಣೀರಾದರು. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಪೂಜಾ ವಿಧಾನ ನೆರವೇರಿಸಿ, ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮಾರ್ಥ್ಯ ಅವರಿಂದ ಅಗ್ನಿ ಸ್ಪರ್ಷ ಮಾಡಲಾಯಿತು.
ಇದಕ್ಕೂ ಮುನ್ನ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ ಖಾಕಿ ಪಡೆಯಿಂದ ಗೌರವ ಅರ್ಪಿಸಲಾಯಿತು.