ಹುಬ್ಬಳ್ಳಿ : ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ ಬೇಲಾ ಮೀನಾ ಅವರು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ (ಡಿಆರ್‌ಎಂ) ಅಧಿಕಾರ ಸ್ವೀಕರಿಸಿದರು. ಇವರು ೧೯೯೬ರ ಬ್ಯಾಚ್‌ನ ಭಾರತೀಯ ರೈಲ್ವೆ ಸಂಚಾರ ಸೇವೆಯ (ಐಆರ್‌ಟಿಎಸ್) ಅಧಿಕಾರಿಯಾಗಿದ್ದು, ೧೯೯೭ ರ ಸೆಪ್ಟೆಂಬರ್ ೪ರಂದು ಭಾರತೀಯ ರೈಲ್ವೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭ ಮಾಡಿದರು.
೧೯೯೯ ರಿಂದ ೨೦೧೭ರ ವರೆಗೆ ಮುಂಬಯಿ ಕೇಂದ್ರಿತ ಪಶ್ಚಿಮ ರೈಲ್ವೆಯ (ವೆಸ್ಟರ್ನ್ ರೈಲ್ವೆ ) ವಿಭಾಗದಲ್ಲಿ ವಾಣಿಜ್ಯ (ಕಮರ್ಷಿಯಲ್ ) ಹಾಗೂ ಪರಿಚಾಲನಾ ( ಆಪರೇಟಿಂಗ್) ವಿಭಾಗದಲ್ಲಿ ಒಟ್ಟು ೬ ವರ್ಷ ಸೇವೆ ಸಲ್ಲಿಸಿ ಮಹತ್ತರ ಕಾರ್ಯ ಸಾಧನೆ ಮಾಡಿದ್ದಾರೆ. ಈ ವಿಭಾಗದ ಬೋರಿವೇಲಿ, ಖಾರ್ ಮತ್ತು ಮಾತುಂಗಾ ರೋಡ್ ನಿಲ್ದಾಣಗಳಿಗೆ ಅತ್ಯಾಧುನಿಕ ಸ್ಫರ್ಶ ನೀಡಿ, ಅವುಗಳ ಆಕರ್ಷಣೆ. ಸ್ವಚ್ಛತೆ ಹಾಗೂ ಸೌಂದರೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಈ ಸಾಧನೆಯನ್ನು ಗುರುತಿಸಿ ಪ್ರಧಾನ ಮಂತ್ರಿಗಳ “ಮನ್ ಕಿ ಬಾತ್ ” ಕಾರ್ಯಕ್ರಮದಲ್ಲಿ ಈ ರೈಲು ನಿಲ್ದಾಣಗಳಿಗೆ ವಿಶೇಷ ಗೌರವ ನೀಡಲಾಯಿತು.
ಡಿಜಿಟಲ್ ರೈಲ್ವೆ ಟಿಕೇಟ್ ಆಳವಡಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಉತ್ತರ ರೈಲ್ವೆ (ನಾರ್ಥನ್ ರೈಲ್ವೆ) ವಿಭಾಗದಲ್ಲಿ ಕಾರ್ಯನಿರ್ವಹಿಸುವಾಗ ರೈಲು ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೇಟ್ (ಯುಟಿಎಸ್) ಪಡೆಯುವಲ್ಲಿ ಇದ್ದ ಭೌಗೊಳಿಕ ನ್ಯೂನ್ಯತೆ ಸರಿಪಡಿಸಿ, ಜಿಯೋ ಫೆನ್ಸಿಂಗ್ ಅಳವಡಿಸಿ ಟಿಕೇಟ್ ವಿತರಣೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಮಾಡಿದರು. ಆಧುನಿಕ ಕ್ಯುಆರ್ (ಕ್ವಿಕ್ ರೆಸ್ಪಾನ್ಸ್) ಆಧಾರಿತ ಎಲ್ಲ ರೀತಿಯ ಟಿಕೇಟ್ ಖರೀದಿಗೆ ಹಾಗೂ ವಿಶೇಷ ಚೇತನರಿಗೆ ಮೊಬೈಲ್ ಆಧಾರಿತ ಕಾಯ್ದಿರಿಸದ ಟಿಕೇಟ್ (ಯುಟಿಎಸ್) ಬುಕ್ಕಿಂಗ್ ಸೌಲಭ್ಯವನ್ನು ಪರಿಚಯಿಸಿದರು.
೨೭ ವರ್ಷಗಳ ಸೇವಾ ಅನುಭವ ಹೊಂದಿರುವ ಬೇಲಾ ಮೀನಾ ಅವರು ಈ ಮೊದಲು ಹಿರಿಯ ವಾಣಿಜ್ಯ ವ್ಯವಸ್ಥಾಪಕರಾಗಿ (ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್) , ಮುಖ್ಯ ಯೋಜನಾ ವ್ಯವಸ್ಥಾಪಕರಾಗಿ (ಚೀಫ್ ಪ್ರೊಜೆಕ್ಟ್ ಮ್ಯಾನೇಜರ್À) ಹಿರಿಯ ಟ್ರಾನ್ಸಪೋರ್ಟೆಷನ್ ವ್ಯವಸ್ಥಾಪಕರಾಗಿ ಹಾಗೂ ಶುಲ್ಕರಹಿತ ಆದಾಯ ಮತ್ತು ಪ್ರಯಾಣಿಕರ ಮಾರುಕಟ್ಟೆ ವಿಭಾಗದಲ್ಲಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಉತ್ತಮ ಕಾರ್ಯ ಸಾಧನೆ ಮಾಡಿದ್ದಾರೆ. ಇವರ ಈ ಸೇವಾ ಅನುಭವ, ತಂತ್ರಜ್ಞಾನದ ಪರಿಣತಿ, ಸದೃಢ ನಾಯಕತ್ವದ ಗುಣದಿಂದ ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ ಮತ್ತಷ್ಟು ಮೆರಗು ತುಂಬಲಿದ್ದು, ಆ ಮೂಲಕ ರೈಲ್ವೆಯ ಹಿರಿಮೆ ಹೆಚ್ಚಲಿದೆ ಎಂದು ಪ್ರಕಟಣೆ ತಿಳಿಸಿದೆ.