ಬೆಂಗಳೂರು: ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ‘ನಾದದ ನವನೀತ’ ಸಾಕ್ಷ್ಯ ಚಿತ್ರಕ್ಕೆ 68ನೇ ರಾಷ್ಟ್ರಪ್ರಶಸ್ತಿ ಬಂದ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, “ನಾನು ಮೂಲತಃ ಚಿತ್ರ ನಿರ್ದೇಶಕ. ಸಾಕ್ಷ್ಯ ಚಿತ್ರ ನಿರ್ದೇಶಕನಲ್ಲ. ಆದರೂ ಅನಂತಮೂರ್ತಿ, ಗೋಪಾಲಕೃಷ್ಣರಂತಹ ಕುರಿತಾದ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ರಾಜಕೀಯ ನಂಟಿಲ್ಲದ ಹಾಗೂ ಇಂಗ್ಲೀಷ್ ಬಾರದ ಹೆಸರಾಂತ ಹಿಂದುಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಸಾಕ್ಷ್ಯ ಚಿತ್ರವನ್ನು ಇಲಾಖೆಯೊಂದಿಗೆ ಜೊತೆಗೂಡಿ ನಿರ್ಮಾಣ ಮಾಡಲು ಹೊರಟಾಗ ಇದು ಕೇವಲ ಸಂದರ್ಶನವಾಗಬಾರದು ಬೇರೆ ರೀತಿಯಲ್ಲಿ ಮಾಡಬೇಕೆಂದು ಅಂದುಕೊಂಡು ಮಾಡಿದ ಡಾಕ್ಯುಮೆಂಟರಿ ‘ನಾದದ ನವನೀತ’. ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ನಾಡಿನ ಸಾಧಕರು, ಪ್ರತಿಭಾವಂತರ ಕುರಿತಂತೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸುತ್ತದೆ. ಈವರೆಗೂ ನೂರಾರು ಮಂದಿಯ ಜೀವನಕಥೆಗಳನ್ನು ಇಲಾಖೆ ತಯಾರಿಸಿದೆ. ಇದೇ ಮೊದಲ ಬಾರಿಗೆ ಕಥೇತರ ವಿಭಾಗದಲ್ಲಿ ಇಲಾಖೆ ನಿರ್ಮಿಸಿದ ಹೆಸರಾಂತ ಹಿಂದುಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಕುರಿತ ಸಾಕ್ಷ್ಯ ಚಿತ್ರಕ್ಕೆ ಕಥೇತರ ವಿಭಾಗದಲ್ಲಿ ‘ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ’ ಎಂಬ ಪ್ರಶಸ್ತಿ ದೊರೆತಿದೆ.






















