ತಾಯಿ ಮಡಿಲು ಸೇರಿದ ನವಜಾತ ಶಿಶು: ಸುಖಾಂತ್ಯ ಕಂಡ ಪ್ರಕರಣ..!

0
102

ಬಾಗಲಕೋಟೆ: ನವನಗರದ ಜಿಲ್ಲಾಸ್ಪತ್ರೆಯಿಂದ‌ ಕಳುವಾಗಿದ್ದ ಮಗು ಕೆಲವೇ ಗಂಟೆಗಳಲ್ಲಿ ಪತ್ತೆಯಾಗಿ ತಾಯಿಯ ಮಡಿಲು ಸೇರಿದೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಶುಕ್ರವಾರ ಸಂಜೆ ಬಾದಾಮಿ ಮೂಲದ ಮಾಬೂಬಿ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ‌ನರ್ಸ್ ರೂಪದಲ್ಲಿ ಬಂದ ಮಹಿಳೆ ಮಗು ಹೊತ್ತು ಪರಾರಿಯಾಗಿದ್ದಳು.‌ ಮಗು ಕಳುವು ಮಾಡಿದ್ದ ಮಹಿಳೆ ಅದೇ ಆಸ್ಪತ್ರೆಯಲ್ಲಿ ಪಕ್ಕದ ವಾರ್ಡ್‌ನಲ್ಲಿ ದಾಖಲಾಗಿದ್ದವಳು ಎಂದು ತಿಳಿದು ಬಂದಿದೆ. ಆಕೆ ಆಸ್ಪತ್ರೆ ಡಿಸ್ಚಾರ್ಜ್ ಆಗುವ ವೇಳೆ ಸಿಬ್ಬಂದಿಗೆ ಅನುಮಾನ ಮೂಡಿದ್ದು, ಹಿಡಿದು ವಿಚಾರಿಸಿದಾಗ ಮಗು ಆಕೆ ಬಳಿಯಿದ್ದಿದ್ದು ಗೊತ್ತಾಗಿದೆ. ‌ಮಹಿಳೆಗೆ ಮಕ್ಕಳು ಇರಲಿಲ್ಲ ಎಂದು ಹೇಳಲಾಗಿ‌‌ದೆ‌. ಮೊದಲು ಆ ಮಹಿಳೆ ತನ್ನದೇ ಎಂದು ವಾದಿಸಿದ್ದಾಳೆ. ಮಾಬೂಬಿ ಕುಟುಂಬಸ್ಥರು ತಮ್ಮದೇ ಮಗು ಎಂದು ಖಚಿತಪಡಿಸಿದ್ದು, ಆರೋಪಿತ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಸಿಸಿಟಿವಿಯೂ ಇರಲಿಲ್ಲ..!
ಮಗು ಕಳ್ಳತನ ಪ್ರಕರಣ ಅದೃಷ್ಟಕ್ಕೆ ಸುಖಾಂತ್ಯ ಕಂಡಿದೆ. ಆದರೆ ಘಟನೆ ನಡೆದ ನಂತರ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ ಆಸ್ಪತ್ರೆಯಲ್ಲಿನ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ‌ಇದಾದ ನಂತರ ಮಗು ಹುಡುಕುವುದು ಸವಾಲಾಗಿತ್ತು. ಆದರೆ ಅದೃಷ್ಟಕ್ಕೆ ಆಸ್ಪತ್ರೆ ಆವರಣದಲ್ಲೇ ಮಗು ಪತ್ತೆಯಾಗಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Previous articleಗ್ಯಾರಂಟಿಗೆ ಹಣ ಹೊಂದಿಸಲಾಗದೇ ಕೇಂದ್ರದ ವಿರುದ್ಧ ಸಿಎಂ ರಾಜಕೀಯ ಆರೋಪ
Next articleಪತ್ರಿಕೋದ್ಯಮ ಜನಪರ ಕೆಲಸ ಮಾಡುವುದು ಮುಖ್ಯ: ಬೊಮ್ಮಾಯಿ