Home Advertisement
Home ತಾಜಾ ಸುದ್ದಿ ಜನಿವಾರ ಕಳಚಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರ್ಕಾರ ಬದ್ಧ

ಜನಿವಾರ ಕಳಚಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರ್ಕಾರ ಬದ್ಧ

0
133

ಬೆಳ್ತಂಗಡಿ: ವಿದ್ಯಾರ್ಥಿಗಳ ಜನಿವಾರ ಕಳಚಿಸಿರುವ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲು ಸರ್ಕಾರ ಬದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು ಇಂದು ಬೆಳ್ತಂಗಡಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ ಆಚರಣೆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಆಯಾ ಧರ್ಮ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಮ್ಮ ಸರ್ಕಾರ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ನಾವು ಜಾತಿ ಧರ್ಮ ಬೇಡ ಎಂದು ಎಷ್ಟೇ ಹೇಳಿದರೂ, ನಮ್ಮ ಹುಟ್ಟು ಹಾಗೂ ಸಾವು ನಮ್ಮ ಜಾತಿ ಹಾಗೂ ಧರ್ಮಗಳನ್ನು ನೆನಪಿಸುತ್ತದೆ ಎಂದರು.
ಅನೇಕರು ರಾಜಕೀಯ ಟೀಕೆ ಮಾಡುತ್ತಿದ್ದಾರೆ. ಮಾಡಕೊಳ್ಳಲಿ. ಟೀಕೆ ಮಾಡಿದರೆ ನಾವು ತಿದ್ದುಕೊಳ್ಳಲು ಅವಕಾಶ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮಲ್ಲಿ ದೋಷ ಇದ್ದರೆ ಮಾತ್ರ ತಿದ್ದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದೇ ರೀತಿ ನಾವು ಇಂದು ಜ್ಞಾನ, ಗುರು, ದೇವರನ್ನು ಸ್ಮರಿಸಲು ಇಲ್ಲಿ ಸೇರಿದ್ದೇವೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಶೃಂಗೇರಿಯ ಶಾರದಾ ಪೀಠದ ಶ್ರೀಗಳು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿದ್ದಾರೆ ಎಂದರು.
ಮಠಗಳು, ಶಿಕ್ಷಣ ಸಂಸ್ಥೆಗಳಿಗೆ ಕೈಲಾದ ಸಹಾಯ ಮಾಡಿ:
ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಸರಳತೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಸರಳತೆಗೆ ಹೆಸರಾಗಿರುವ ಪೀಠ ಶೃಂಗೇರಿ ಮಠದ ಪೀಠ. ನಿರ್ಮಲಾನಂದ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಬಂದು ನಿಮಗೆ ಆಶೀರ್ವದಿಸಿದ್ದಾರೆ. ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ನಾವು ನಮ್ಮ ಮನೆ ಕಾಪಾಡಿಕೊಳ್ಳುವಂತೆ ಮಠಗಳನ್ನು ಕಪಾಡಿಕೊಳ್ಳಬೇಕು. ಆಗ ಮಾತ್ರ ಧರ್ಮ ಉಳಿಸಲು ಸಾಧ್ಯ. ದೇವರು ನಮಗೆ ಎರಡು ಆಯ್ಕೆ ನೀಡುತ್ತಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಹೀಗಾಗಿ ನೀವು ನಿಮ್ಮ ಕೈಲಾದ ದಾನ ಧರ್ಮದ ಮೂಲಕ ಸಹಾಯ ಮಾಡಿ ಎಂದರು.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ, ನದಿ, ಹಸು ಎಲ್ಲವೂ ಪರರ ಉಪಕಾರಕ್ಕಾಗಿ ಇವೆ. ಅದೇ ರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಸೀಮಿತವಾಗಬೇಕು ಎಂಬುದು ಈ ಶ್ಲೋಕದ ಅರ್ಥ. ಅದೇ ರೀತಿ ನೀವು ನಿಮ್ಮ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡಿ ಎಂದು ತಿಳಿಸಿದರು.

Previous articleಮುಖ್ಯಮಂತ್ರಿಗಳೇ ವಿವಾದದ ಹೊಣೆಹೊತ್ತು ಜನರ ಕ್ಷಮೆಯಾಚಿಸಲಿ
Next articleನಕಲಿ ನೋಟಿನ ಆರೋಪಿ ಒಂದು ವಾರ ಕಸ್ಟಡಿಗೆ