ಬೆಂಗಳೂರು: ಕೇವಲ ಬಸ್ ನಿಲ್ಲಿಸುವ ವಿಚಾರಕ್ಕೆ ಆರಂಭವಾದ ಗಲಾಟೆ ವ್ಯಕ್ತಿಯೊಬ್ಬನ ಬಲಿ ಪಡೆದಿದೆ. ವ್ಯಕ್ತಿಯನ್ನು ಕೊಲೆಗೈದು ಮೋರಿಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದೆ. ವೆಂಕಟಸ್ವಾಮಿ (52) ಮೃತ ವ್ಯಕ್ತಿಯಾಗಿದ್ದರೆ, ವೆಂಕಟೇಶ್ (48) ಹಂತಕನಾಗಿದ್ದಾನೆ.
ಜನವರಿ 13ರಂದು ಸುಂಕದಕಟ್ಟೆಯ ಸಾಗರ್ ಟಿಂಬರ್ ಪ್ಲೈವುಡ್ ಅಂಗಡಿ ಮುಂಭಾಗದ ಮೋರಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮೃತನ ಎದೆಯ ಎಡ ಎಲುಬುಗಳು ಮುರಿದು ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿರುವುದು ಸಾಬೀತಾಗಿತ್ತು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಗಡಿ ರಸ್ತೆಯ ಕೊಡಿಗೆಹಳ್ಳಿ ನಿವಾಸಿ ಆರೋಪಿ ವೆಂಕಟೇಶ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹತ್ಯೆಯ ಅಸಲಿ ಕಾರಣ ಬಯಲಾಗಿದೆ.
ಆರೋಪಿ ವೆಂಕಟೇಶ್ ಜನವರಿ 12ರ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಜಿ.ಟಿ.ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಸ್ ನಿಲ್ಲಿಸಿ ಮಲಗಿದ್ದಾಗ ಬಂದಿದ್ದ ವೆಂಕಟಸ್ವಾಮಿ, ‘ತಾನು ಬಸ್ ನಿಲ್ಲಿಸುವ ಜಾಗದಲ್ಲಿ ಬಸ್ ನಿಲ್ಲಿಸಿದ್ದೀಯಾ? ಎಂದು ವೆಂಕಟೇಶನ ಬಸ್‍ಗೆ ಕಲ್ಲು ಎಸೆದಿದ್ದ. ಬಳಿಕ ಬಸ್ಸಿನೊಳಗೆ ಬಂದು ಗಲಾಟೆ ಶುರುಮಾಡಿದ್ದ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ವೆಂಕಟಸ್ವಾಮಿಗೆ ಕಾಲಿನಿಂದ ಜೋರಾಗಿ ಒದ್ದಿದ ವೆಂಕಟೇಶ್ ಬಸ್ಸಿನ ಮೆಟ್ಟಿಲುಗಳ ಮೇಲೆ ಬೀಳಿಸಿದ್ದ. ಕೆಳಗೆ ಬಿದ್ದಿದ್ದ ಆತನನ್ನು ಕಾಲಿನಿಂದ ತುಳಿದಾಗ ಆಂತರಿಕ ರಕ್ತಸ್ರಾವವಾಗಿ ವೆಂಕಟಸ್ವಾಮಿ ಮೃತಪಟ್ಟಿದ್ದ. ಬಳಿಕ ಆರೋಪಿ ಮೃತದೇಹವನ್ನು ಸುಂಕದಕಟ್ಟೆಯ ಸಾಗರ್ ಟಿಂಬರ್ ಪ್ಲೈವುಡ್ ಅಂಗಡಿ ಮುಂಭಾಗದ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪರಿಚಿತ ಶವದ ಪೂರ್ವಾಪರ ಮಾಹಿತಿ ಕಲೆಹಾಕಿ ತನಿಖೆ ನಡೆಸಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಯ ಅಸಲಿ ಸತ್ಯ ಬಹಿರಂಗವಾಗಿದೆ.
























