ಕೇಂದ್ರ ಸರ್ಕಾರ ಒಕ್ಕೂಟ ಧರ್ಮ ಪಾಲನೆ ಮಾಡಬೇಕು

0
19

ಬೆಂಗಳೂರು : ಜುಲೈ 1 ರಿಂದ ರಾಜ್ಯದ ಜನರಿಗೆ ಅಕ್ಕಿಯನ್ನು ನೀಡಲು ಸರ್ಕಾರ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಇರುವುವರು ಒಕ್ಕೂಟ ಧರ್ಮ ಪಾಲನೆ ಮಾಡಬೇಕು ಎಂದಿದ್ದಾರೆ ಅವರ ಸರಣಿ ಟ್ವೀಟ್‌ನಲ್ಲಿ ಅವರು ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (ಎನ್.ಸಿ.ಸಿ.ಎಫ್), ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಭಾರತ ಸರ್ಕಾರಕ್ಕೆ ಸೇರಿದ್ದು, ಈ ಮೂರು ಸಂಸ್ಥಗಳಿಂದ ಅಕ್ಕಿ ಪಡೆಯಲು ದರಪಟ್ಟಿ ಕರೆಯಲು ಕ್ರಮ ಕೈಗೊಳ್ಳಲಾಗುವುದು. ಭಾರತೀಯ ಆಹಾರ ಮಂಡಳಿ(ಎಫ್.ಸಿ.ಐ) ನಿಂದ 34 ರೂ. ಅಕ್ಕಿ , 2.60 ರೂ. ಸಾಗಾಣಿಕೆ ವೆಚ್ಚ ಸೇರಿ ಒಂದು ಕೆ.ಜಿ. ಅಕ್ಕಿಗೆ ಒಟ್ಟು 36.40 ರೂ. ವೆಚ್ಚ ತಗಲುತ್ತದೆ. ಎನ್.ಸಿ.ಸಿ.ಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರ ಈ ಮೂರು ಸಂಸ್ಥೆಗಳು ನಮೂದಿಸುವ ದರ, ಸರಬರಾಜು ಮಾಡುವ ಪ್ರಮಾಣಗಳ ವಿವರ ಪಡೆಯಲಾಗುವುದು. ಟೆಂಡರ್ ಮೂಲಕ ಅಕ್ಕಿ ಪಡೆಯಲೂ ಕ್ರಮ ಕೈಗೊಳ್ಳಲಾಗುವುದು. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗುಲಲಿದೆ. ವರ್ಷಕ್ಕೆ ರೂ. 10,092 ಕೋಟಿ ವೆಚ್ಚವಾಗಲಿದೆ. ಬಡಜನರ ಹಸಿವು ನೀಗಿಸಲು ಸರ್ಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ. ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಬಿಜೆಪಿ ಸರ್ಕಾರದವರು ಅಕ್ಕಿ ನೀಡಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿ ಪಕ್ಷದವರು ರಾಜ್ಯದ ಬಡವರಿಗೆ ಅನುಕೂಲವಾಗಲು ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಬಹುದಲ್ಲವೇ? ರಾಜ್ಯದಲ್ಲಿ ರಾಗಿ, ಜೋಳವನ್ನು 6 ತಿಂಗಳವರೆಗೆ ತಲಾ 2 ಕೆಜಿ ಕೊಡುವಷ್ಟು ಮಾತ್ರ ದಾಸ್ತಾನು ಲಭ್ಯವಿದೆ. ಹಳೇ ಮೈಸೂರು ಭಾಗದ ಜನರಿಗೆ 2 ಕೆಜಿ ರಾಗಿ ಹಾಗೂ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಇನ್ನುಳಿದ 3 ಕೆಜಿಯಷ್ಟು ಪ್ರಮಾಣದ ಅಕ್ಕಿಯನ್ನು ನೀಡಬೇಕಾಗುತ್ತದೆ. ಜುಲೈ 1 ರಿಂದ ರಾಜ್ಯದ ಜನರಿಗೆ ಅಕ್ಕಿಯನ್ನು ನೀಡಲು ಸರ್ಕಾರ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕೇಂದ್ರ
ಬಿಜೆಪಿ ಸರ್ಕಾರದಲ್ಲಿ ಅಕ್ಕಿಯ ದಾಸ್ತಾನು ಲಭ್ಯವಿದ್ದು, ಅವರು ರಾಜ್ಯಕ್ಕೆ ಅಕ್ಕಿ ನೀಡಲು ಮನಸ್ಸು ಮಾಡಬೇಕಿದೆ. ಎಂ.ಎಸ್.ಪಿ ಮೂಲಕ ಅಕ್ಕಿ ಖರೀದಿಸಬೇಕಾಗಿದೆ. ಬಡವರಿಗೆ ಅಕ್ಕಿ ನೀಡುವ ವಿಷಯದಲ್ಲಿ ಯಾರೇ ಎಷ್ಟೇ ರಾಜಕಾರಣ ಮಾಡಿದರೂ, ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಖಂಡಿತ ಜಾರಿಗೊಳಿಸಲಿದೆ. ಸಹಕಾರಿ ಒಕ್ಕೂಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರ್ಕಾರಕ್ಕೆ ತೆರಿಗೆ ಬರುವುದು ರಾಜ್ಯಗಳಿಂದ. ಹೀಗಾಗಿ ಅವರು ಒಕ್ಕೂಟ ಧರ್ಮ ಪಾಲನೆ ಮಾಡುವ ಮೂಲಕ ರಾಜ್ಯಗಳಿಗೆ ಸಹಕಾರ ನೀಡಬೇಕು ಎಂದಿದ್ದಾರೆ.

Previous articleಗ್ಯಾರಂಟಿ ಸರ್ಕಾರ ಉಳಿಯಲ್ಲ ಎಂದವರಿಗೆ: ಭಾಷಣ ಮಾಡೋದು ಬಿಡಿ ಎಂದು ತಿರುಗೇಟು
Next articleನಾಪತ್ತೆಯಾಗಿದ್ದ ಸರಕಾರಿ ವೈದ್ಯ ಬಾವಿಯಲ್ಲಿ ಶವವಾಗಿ ಪತ್ತೆ