ಕಾಳಜಿ ಕೇಂದ್ರದಲ್ಲಿ ನಡೆದಿದೆ ಬಾಣಂತಿ ಆರೈಕೆ

0
10

ಬಾಗಲಕೋಟೆ(ಕಲಾದಗಿ): ಕಳೆದ ನಾಲ್ಕೈದು ದಿನಗಳಿಂದ ಗ್ರಾಮ ಸೇರಿದಂತೆ ಈ ಭಾಗದ ನದಿ ದಂಡೆಯ ಗ್ರಾಮ ವಾಸಿಗಳನ್ನು ದುಗುಡಕ್ಕೆ ದೂಡಿದ್ದ ಘಟಪ್ರಭೆಯ ಪ್ರವಾಹದ ಪರಿಸ್ಥಿತಿ ಬುಧವಾರ ಯಥಾಸ್ಥಿಯಲ್ಲಿರುವುದು ಹಾಗು ಮೇಲ್ಭಾಗದಲ್ಲಿಯೂ ಪ್ರವಾಹದ ಪರಿಸ್ಥಿತಿ ತಹಬದಿಗೆ ಬಂದಿರುವುದು ಎಲ್ಲರಿಗೂ ನೆಮ್ಮದಿಯನ್ನುಂಟು ಮಾಡಿದೆ.
ಗ್ರಾಮದ ಡೋರ್ ಗಲ್ಲಿ, ಸದರ್ ಬಜಾರ ಕೆಳಭಾಗದಲ್ಲಿರುವ ಸಮಗಾರ ಓಣಿಗಳ ಸಮೀಪದ ಪ್ರವಾಹ ಮೈಚಾಚಿಕೊಂಡಿದ್ದು ನೀರಿಗೆ ಸಮೀಪದಲ್ಲಿಯೇ ಇದ್ದ ಮೂರು ತಿಂಗಳ ಹಸುಗೂಸಿನೊಂದಿಗೆ ದೀಪಾ ಬೆಣಗಿ ಎಂಬ ಬಾಣಂತಿಯನ್ನು ಸೇರಿಸಿದಂತೆ ಈ ಪ್ರದೇಶದ ನಾಲ್ಕು ಕುಟುಂಬಗಳ ಸದಸ್ಯರನ್ನು ಮೀನಗಾರ ಓಣಿ ಸರ್ಕಾರಿ ಶಾಲೆಯಲ್ಲಿರುವ `ಕಾಳಜಿ ಕೇಂದ್ರ’ಕ್ಕೆ ಮಂಗಳವಾರ ಸಂಜೆ ಸ್ಥಳಾಂತರಿಸಲಾಗಿದ್ದು, ಅವರಿಗೆಲ್ಲ ಊಟೋಪಚಾರ, ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಅತ್ಯಗತ್ಯ ವ್ಯವಸ್ಥೆ ಮಾಡಲಾಗಿದೆ.
ಪ್ರವಾಹ ಹೆಚ್ಚಾದರೆ ಇನ್ನಷ್ಟು ಮನೆಗಳಿಗೆ ಬಾಧಿತವಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಮನೆಗಳವರ ಸುರಕ್ಷತೆಗಾಗಿ ಗ್ರಾಮದಲ್ಲಿ ಇನ್ನೆರಡು ಕಾಳಜಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ರಸ್ತೆಗಳು ಇನ್ನೂ ಬಂದ್: ಪ್ರವಾಹಕ್ಕೆ ಬಂದ್ ಆಗಿರುವ ಕಲಾದಗಿ ಕಾತರಕಿ ನಡುವಿನ ರಸ್ತೆ, ಸಂಶಿ ಕ್ರಾಸ್ ಕಲಾದಗಿ ನಡುವಿನ ರಸ್ತೆಗಳು ಇನ್ನೂ ಬಂದ್ ಆಗಿದ್ದು ಸಂಚಾರಕ್ಕೆ ಬಹಳ ಅಡೆತಡೆಯುಂಟಾಗಿದೆ.
ಬೆಳೆಗಳು ಜಲಾವೃತ: ಮಂಗಳವಾರದಿಂದ ಇನ್ನಷ್ಟು ಜಮೀನುಗಳಲ್ಲಿರುವ ಬೆಳೆಗಳು ಜಲಾವೃತವಾಗಿದ್ದು ಇದರಿಂದ ಅನ್ನದಾತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸದ್ಯಕ್ಕೆ ೧೦೦ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿನ ಸಮೃದ್ಧ ಬೆಳೆಗಳು ಜಲಾವೃತವಾಗಿದ್ದು, ನೀರು ದೂರ ಸರಿದ ನಂತರವಷ್ಟೆ ಬೆಳೆ ಹಾನಿಯ ಲೆಕ್ಕ ಪಕ್ಕಾ ಸಿಗಲಿದೆ.
ಕಾಳಜಿ ಕೇಂದ್ರಕ್ಕೆ ಎಸಿ ಭೇಟಿ: ಬುಧವಾರ ಗ್ರಾಮದ ಮೀನಗಾರ ಓಣಿ ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸಾರ ಅಲ್ಲಿದ್ದ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಊರೊಳಗೆ ತೆರಳಿ ಬಾಧಿತ ಪ್ರದೇಶಗಳ ಸ್ಥಿತಿ ಅವಲೋಕಿಸಿದರು. ಸ್ಥಳದಲ್ಲಿದ್ದ ಉಪತಹಶೀಲ್ದಾರ ಆರ್.ಆರ್. ಕುಲಕರ್ಣಿ ಅವರಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಿದರು.

Previous articleಸಲಹುವರಾರೋ ಅವರು ದೇವರು
Next articleಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ