ಕಾಂಗ್ರೆಸ್ ಪ್ರಣಾಳಿಕೆಗೆ ಹಿಂಜಾವೇ ಖಂಡನೆ

0
9

ಬಾಗಲಕೋಟೆ: ಸೇವಾ, ಸುರಕ್ಷಾ, ಸಂಸ್ಕಾರದ ಧ್ಯೇಯವನ್ನಿಟ್ಟುಕೊಂಡು ಸಮಾಜ ಸೇವೆ ಮಾಡುತ್ತಿರುವ ಭಜರಂಗದಳವನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವುದಕ್ಕೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಂಘಟನೆಯ ದಕ್ಷಿಣ ಪ್ರಾಂತ ಸಂಚಾಲಕ ಧೋ. ಕೇಶವಮೂರ್ತಿ ಹಾಗೂ ಉತ್ತರ ಪ್ರಾಂತ ಸಂಚಾಲಕ ಅಯ್ಯನಗೌಡ ಹೇರೂರ ಅವರು ಜಂಟಿ ಪ್ರಕಟಣೆ ನೀಡಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಮೂಲಭೂತವಾದಿಗಳ ಅಣತಿಯಂತೆ ಪ್ರಣಾಳಿಕೆ ರೂಪಿಸಿದೆ ಎಂದು ಹರಿಹಾಯ್ದಿದ್ದಾರೆ.
ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮೇಲಿದ್ದ 125 ಕೇಸ್‌ಗಳನ್ನು ವಾಪಸ್ ಪಡೆದು ಹಿಂದೂ ವಿರೋಧಿ ದುಷ್ಕೃತ್ಯ ನಡೆಸುವವರಿಗೆ ಬಹಿರಂಗ ಬೆಂಬಲ ನೀಡಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಭಜರಂಗದಳ ನಿಷೇಧ ಮಾಡುವುದಾಗಿ ಹೇಳುತ್ತಿದೆ ಎಂದರು.
ಭಜರಂಗದಳ ಸೇರಿ ಹಿಂದೂ ಸಂಘಟನೆಗಳು ಹಿಂದು ಧಾರ್ಮಿಕ ಕೇಂದ್ರಗಳ ರಕ್ಷಣೆ, ಗೋಸೇವೆ, ಕೊರೊನಾ, ಪ್ರವಾಹದಂಥ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವಾ ಕಾರ್ಯಗಳನ್ನು ಮಾಡಿರುವುದನ್ನು ಇಡೀ ವಿಶ್ವವೇ ಗುರುತಿಸಿದೆ. ರಾಷ್ಟ್ರದ ಹಿತಕ್ಕಾಗಿಯೇ ಹಿಂದೂಪರ ಸಂಘಟನೆಗಳು ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ಇಡೀ ಹಿಂದೂ ಸಮಾಜ ಉಗ್ರವಾಗಿ ಖಂಡಿಸುತ್ತದೆ, ಕೂಡಲೇ ಭಜರಂಗದಳ ನಿಷೇಧ ಎಂಬ ಪದವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

Previous articleಜೆಡಿಎಸ್‌ ಅಭ್ಯರ್ಥಿಗೆ ದಿಗ್ಬಂಧನ
Next articleಕಲಬುರಗಿಯಲ್ಲಿ ಮೋದಿ ಮೋಡಿ, ಮೆಗಾ ರೋಡ್ ಶೋ