‘ಕನ್ನಡಿಗರ ಜೀವನಾಡಿ ನಂದಿನಿ ತಂಟೆಗೆ ಬಂದರೆ ಬಿಜೆಪಿ ಭಸ್ಮ’-ಕುಮಾರಸ್ವಾಮಿ

0
14

ಬೆಂಗಳೂರು : “ನಂದಿನಿ ಕನ್ನಡಿಗರ ಜೀವನಾಡಿ. ಅದರ ತಂಟೆಗೆ ಬಂದರೆ ಬಿಜೆಪಿ ಭಸ್ಮವಾಗುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಅಮುಲ್ ಹಾಗೂ ನಂದಿನಿ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಮಂಡ್ಯದಲ್ಲಿ ಹೇಳಿದ್ದ ಕೇಂದ್ರ ಗೃಹ ಸಚಿವರ ಹೇಳಿಕೆ ವಿರುದ್ದ ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ಇಡೀ ದೇಶವನ್ನೇ ಆಳಿದ ಕನ್ನಡಿಗರು ಯಾರೊಬ್ಬರ ಗುಲಾಮರಲ್ಲ. ಕರ್ನಾಟಕವನ್ನು ಆಕ್ರಮಣ ಮಾಡಿಕೊಳ್ಳುವ ಹಾಗೂ ಆರ್ಥಿಕ, ಕೈಗಾರಿಕೆ ಕ್ಷೇತ್ರಗಳಲ್ಲಿ ರಾಜ್ಯವನ್ನು ಹತ್ತಿಕ್ಕುವ ಹುನ್ನಾರ ಯಶಸ್ಸು ಕಾಣದು. ಬಿಜೆಪಿಯ ಬ್ರಹ್ಮರಾಕ್ಷಸ ರೂಪ ಕನ್ನಡಿಗರಿಗೆ ಈಗ ಅರಿವಾಗುತ್ತಿದೆ ಎಂದು ಜರೆದಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್ ಗಳಿಗೆ ಅಡಿಯಾಳನ್ನಾಗಿಸಿ, ಹಿಂದಿ ಭಾಷಿಗರ ಉದ್ಧಾರಕ್ಕಾಗಿ ಕನ್ನಡಿಗರ ಅನ್ನ ಕಸಿದುಕೊಂಡ ಬಿಜೆಪಿ, ಈಗ ನಂದಿನಿಯನ್ನು ಹೊಡೆದುಕೊಂಡು ಹೋಗಲು ಹಿಡನ್ ಅಜೆಂಡಾ ರೂಪಿಸಿದಂತಿದೆ. ಕರ್ನಾಟಕ ಎಂದಿಗೂ ಗುಜರಾತಿನ ವಸಾಹತು ಆಗುವುದಿಲ್ಲ ಎಂದವರು ಕುಟುಕಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಅಸಹನೆ, ಅಸೂಯೆ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

Previous article‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಬಾವುಟ ಅನಾವರಣ
Next articleಡಿಪಿಆರ್‌ ಅನುಮೋದನೆಗೆ: ಹುಬ್ಬಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ