ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಹಿಂದೆ 94-95ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9,834 ಒಟ್ಟು ಗ್ರಾಮ ಆಡಳಿತಾಧಿಕಾಗಳಿದ್ದು, ಅದರಲ್ಲಿ 8,003 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿಯ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಅಲ್ಲೇ ಇದ್ದು ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮಗಳಲ್ಲಿಯೇ ವಾಸ ಮಾಡುವುದು ಉತ್ತಮ ಎಂದರು.