ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀರಾವರಿ ಸೇರಿದಂತೆ ಎಲ್ಲ ವಿಚಾರವಾಗಿ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಬಿಜೆಪಿಯವರಿಗೆ ರಾಜಕಾರಣವೇ ಮುಖ್ಯ. ಅವರಲ್ಲಿ ಯಾವುದೇ ಒಗ್ಗಟ್ಟಿಲ್ಲ ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡಲು ಅವರೇ ಸಿದ್ಧರಿಲ್ಲ ಎಂದರು.
ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ನಮ್ಮಸರ್ಕಾರ ಬದ್ಧವಿದೆ. ಟೆಂಡರ್ ಕರೆಯುವ ವಿಚಾರವಾಗಿ ನಾವು ಈಗಾಗಲೇ ಎಲ್ಲವೂ ಸಿದ್ಧ ಮಾಡಿಕೊಂಡಿದ್ದೇವೆ. ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಇದರ ಬಗ್ಗೆ ಗಮನಹರಿಸಬೇಕು.ಯಾಕಂದ್ರೆ ಅವರೇ ಈ ಮೊದಲು ಸಂಭ್ರಮ ಮಾಡಿದ್ದು, ಅಲ್ಲದೆ ಅರಣ್ಯ ಇಲಾಖೆ ಅನುಮತಿ ಸಿಗುವ ಭರವಸೆ ಇದೆ. ಅನುಮತಿ ಸಿಕ್ಕರೆ ಕಾಮಗಾರಿ ಆರಂಭ ಮಾಡಲಿದ್ದೇವೆ ಎಂದರು.
ಕೋವಿಡ್ ಹಗರಣದ ಪ್ರಕರಣ ವಿಚಾರವಾಗಿ ಮಾತನಾಡಿ, ಮೈಕೆಲ್ ಡಿ ಕುನ್ಹಾ ವರದಿ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಈ ಬಗ್ಗೆ ತನಿಖೆಯಾಗಬೇಕು, ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.