ಆರ್.ಬಿ.ಐ ದೇಶದ ಆರ್ಥಿಕತೆಯ ರಕ್ಷಕ: ಬಸವರಾಜ ಬೊಮ್ಮಯಿ

0
16
ಸಿಎಂ

ಬೆಂಗಳೂರು: ಆರ್.ಬಿ.ಐ ದೇಶದ ಆರ್ಥಿಕತೆಯ ರಕ್ಷಕನಂತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಿಳಿಸಿದರು. ಅವರು ಇಂದು ಭಾರತೀಯ ರಿಸರ್ವ್ ಬ್ಯಾಂಕಿನ ಪರಿಶಿಷ್ಟ ಜಾತಿ / ಪಂಗಡ ವರ್ಗದ ನೌಕರರ ಸಂಘದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಪ್ರಜಾಪ್ರಭುತ್ವದ ಆತ್ಮ
ಆರ್.ಬಿ.ಐ ತನ್ನದೇ ಇತಿಹಾಸ ಹೊಂದಿದೆ. ಸ್ವತಂತ್ರ ಪೂರ್ವದಿಂದ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ, ದೇಶದ ಆರ್ಥಿಕತೆಯನ್ನು ನಿಯಂತ್ರಣ ಮಾಡುತ್ತಿರುವ ಆರ್.ಬಿ.ಐ ಸಂವಿಧಾನ ದಿನಾಚರಣೆ ಆಚರಿಸುತ್ತಿರುವುದು ಸಂತಸದ ಸಂಗತಿ. ಸಂವಿಧಾನ ಪ್ರಜಾಪ್ರಭುತ್ವದ
ಆತ್ಮ ಇದ್ದಂತೆ. ಸಂವಿಧಾನ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದೆ. ಇಷ್ಟು ದೊಡ್ಡ ಜನಸಂಖ್ಯೆ, ವೈವಿಧ್ಯಮಯ ಸಂಸ್ಕೃತಿ, ಭಾಷೆಗಳಿರುವ ದೇಶ ಒಂದು ಸಂವಿಧಾನವನ್ನು ಒಪ್ಪಿ, ಒಂದು ರಾಷ್ಟ್ರ, ಪ್ರಜಾಪ್ರಭುತ್ವ ವಾಗಿ ಗಣತಂತ್ರವಾಗಿ ಒಗ್ಗೂಡಿ ಕೆಲಸ ಮಾಡುತ್ತಿರುವುದು ಇಂದಿನ ಕಾಲದಲ್ಲಿ ಒಂದಿ ಅದ್ಭುತವೇ ಸರಿ ಎಂದರು.
ಆರ್ಥಿಕತೆಗೆ ವೇಗ
ಆರ್ಥಿಕತೆಯಲ್ಲಿ ಕೇವಲ ಫಲಿತಾಂಶಗಳಿವೆ. ಫಲಿತಾಂಶ ಪಡೆಯಲು ಯೋಜನೆ, ಕ್ರಿಯೆ ಹಾಗೂ ಗುರಿ ಇರಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಸವಾಲುಗಳಿವೆ. ಆದರೆ ಆರ್ಥಿಕತೆಯನ್ನು ಸರಿದೂಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕೋವಿಡ್ ನಂತರದಲ್ಲಿ ಆರ್ಥಿಕತೆಯಲ್ಲಿ ಪುಟಿದೆದ್ದಿರುವ ಕೆಲವೇ ರಾಷ್ಟಗಳಲ್ಲಿ ನಮ್ಮ ದೇಶವೂ ಒಂದು. ಪ್ರಧಾನಮಂತ್ರಿಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕತೆಗೆ ವೇಗ ನೀಡಿದ್ದಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ಮಹತ್ವದ ನಿರ್ಧಾರ ಗಳನ್ನು ಕೈಗೊಂಡಿದ್ದಾರೆ ಎಂದರು.
ಸಾಮಾಜಿಕ ನ್ಯಾಯ ದೊರಕಿಸಲು ಆರ್ಥಿಕತೆ ಪ್ರಮುಖ ಪಾತ್ರ
ಆರ್.ಬಿ.ಐ ಭಾರತದ ಆರ್ಥಿಕತೆ ಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾಮಾಜಿಕ ನ್ಯಾಯ ದೊರಕಿಸಲು ಆರ್ಥಿಕತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಂಬೇಡ್ಕರ್ ಅವರು ಅರಿತೇ ಆರ್.ಬಿ.ಐ ಹುಟ್ಟುಹಾಕಿದರು. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ವಿಶ್ವ ದಲ್ಲಿಯೇ ನಂಬರ್ 1 ದೇಶವಾಗುವತ್ತ ನಾವು ಶ್ರಮಿಸಬೇಕು ಎಂದು ತಿಳಿಸಿದರು.
ಸಂವಿಧಾನದಿಂದ ಶಕ್ತಿ
ಆರ್.ಬಿ. ಐ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಉನ್ನತ ಮಟ್ಟದ ಧ್ಯೇಯ, ತತ್ವವನ್ನಿಟ್ಟುಕೊಂಡು ಕಾನೂನು ಮತ್ತು ಸಂವಿಧಾನದ ಅನುಗುಣವಾಗಿ ಕೆಲಸ ಮಾಡುತ್ತಿರುವುದರಿಂದ ಭಾರತ ದೇಶದ ಆರ್ಥಿಕತೆ ಸಧೃಢವಾಗಿ ಬೆಳೆಯುತ್ತಿದೆ. ಇದು ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ. ಕಾರ್ಯಾಂಗ, ನ್ಯಾಯಾಂಗ ಯಾವುದೇ ರಂಗವಿದ್ದರೂ ಸಂವಿಧಾನಬದ್ಧವಾಗಿ ನಡೆದುಕೊಂಡಾಗ ಮಾತ್ರ ನ್ಯಾಯ ನೀತಿಯಿಂದ ಇರುತ್ತದೆ. ಸಂವಿಧಾನ ಶ್ರೇಷ್ಠ ಗ್ರಂಥ. ಜಗತ್ತಿನ ಎಲ್ಲಾ ತತ್ತ್ವಗಳನ್ನು ಆಯ್ದು ಅದರ ಉತ್ಕೃಷ್ಟ ಗುಣಗಳನ್ನು ಸೇರಿಸಿ ಸಂವಿಧಾನವಾಗಿದೆ. ಸಮಾನ ಅವಕಾಶಗಳನ್ನು ನೀಡುವ ಸಂವಿಧಾನದಿಂದಲೇ ಸ್ವತಂತ್ರ ಭಾರತ ತನ್ನ ಶಕ್ತಿಯನ್ನು ಪಡೆಯುತ್ತದೆ ಎಂದರು.

Previous articleಬೆಳಗಾವಿ ಗಡಿ ವಿವಾದ: ದೆಹಲಿಯಲ್ಲಿ ನಡ್ಡಾ ಭೇಟಿ ಸಾಧ್ಯತೆ: ಬೊಮ್ಮಾಯಿ
Next articleಸೇಡಂ: ಉದ್ಯಮಿ ಕೊಲೆ‌ ಪ್ರಕರಣ: ನಾಲ್ವರ ಬಂಧನ