ಹಾವೇರಿ(ಶಿಗ್ಗಾವಿ): ತಾಲೂಕಿನ ಬಂಕಾಪುರದ ಬಳಿ ಬುಧವಾರ ಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೇ ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಮುಡಸಾಲಿ ಗ್ರಾಮದ ನಿವಾಸಿ ಮಂಜುನಾಥ ಶಿವಪ್ಪ ಜಾಧವ(೪೫) ಕೊಲೆಯಾದ ವ್ಯಕ್ತಿ.
ಹುಬ್ಬಳ್ಳಿ ನವನಗರ ನಿವಾಸಿ ಮಧು ಹಾಗೂ ಅಲಿಸಾಬ್ ಬಂಧಿತ ಆರೋಪಿಗಳು. ಮಂಜುನಾಥ ಪತ್ನಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ಆತ ಎರಡನೇ ಮದುವೆಯಾಗಿದ್ದ. ಈ ನಡುವೆ ಮಧು ಎಂಬುವರೊಂದಿಗೂ ಸಂಬಂಧ ಹೊಂದಿದ್ದ. ಹಣಕಾಸಿನ ವಿಚಾರದಲ್ಲಿ ಮಧು ಜೊತೆಗೆ ಜಗಳವಾಗಿತ್ತು. ಯಾವುದೋ ವಿಚಾರಕ್ಕೆ ಜಗಳ ಉಂಟಾಗಿ ಮಧು, ಇತರರು ಸೇರಿ ಹುಬ್ಬಳ್ಳಿಯ ನವನಗರದ ಮನೆಯಲ್ಲಿ ಲಟ್ಟಣಿಗೆಯಿಂದ ಹೊಡೆದು ಮಂಜುನಾಥನನ್ನು ಕೊಲೆ ಮಾಡಿದ್ದರು. ನಂತರ ಅಲಿಸಾಬ್‌ನ ಸಹಾಯದಿಂದ ಬೊಲೆರೋ ಜೀಪ್‌ನಲ್ಲಿ ಮೃತದೇಹ ತಂದು ಬಂಕಾಪುರದ ಬಳಿ ಬೈಕ್ ಸಮೇತ ಎಸೆದು ಹೋಗಿದ್ದರು.
ಈ ಕುರಿತು ಬಂಕಾಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಮಧು, ಅಲಿಸಾಬ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.