ನವದೆಹಲಿ: ಕೇಂದ್ರ ಸರ್ಕಾರ ವಿವಿಧ ವಲಯದ ಉದ್ಯೋಗಿಗಳಿಗೆ ಸಿಹಿಸುದ್ದಿಯನ್ನು ನೀಡಲಿದೆ. ಪಿಎಫ್ ಹಣವನ್ನು ವಾಪಸ್ ಪಡೆಯುವ ನಿಯಮವನ್ನು ಪರಿಷ್ಕರಣೆ ಮಾಡಲಿದ್ದು, 10 ವರ್ಷಕ್ಕೊಮ್ಮೆ ಪೂರ್ಣ ಹಣವನ್ನು ವಾಪಸ್ ಪಡೆಯಲು ಅವಕಾಶ ನೀಡಲಾಗುತ್ತದೆ.
ಈಗ ಪಿಎಫ್ ಹಣವನ್ನು ಪೂರ್ಣ ಪಡೆಯಲು ನಿವೃತ್ತರಾಗುವ ತನಕ ಕಾಯಬೇಕಿದೆ, ಇಲ್ಲವೇ ಉದ್ಯೋಗ ತೊರೆದು ಮೂರು ತಿಂಗಳು ಆಗಿರಬೇಕು. ಆದರೆ ಈಗ ಹೊಸ ನಿಯಮದ ಪ್ರಕಾರ 10 ವರ್ಷಗಳಿಗೊಮ್ಮೆ ಶೇ 60ರಷ್ಟು ಹಣವನ್ನು ವಾಪಸ್ ಪಡೆಯಲು ಅವಕಾಶ ಕೊಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಈಗ ಪಿಎಫ್ ಹಣ ವಾಪಸ್ ಪಡೆಯುವ ಕೆಲವು ನಿಯಮಗಳನ್ನು ಪರಿಷ್ಕರಣೆ ಮಾಡುವ ಕರಡು ಸಿದ್ಧಪಡಿಸಿದೆ. ಮನಿ ಕಂಟ್ರೋಲ್ ಈ ಕುರಿತು ಸುದ್ದಿಯನ್ನು ಪ್ರಕಟಿಸಿದೆ.
ಹೇಗೆ ನಿಯಮ ಪರಿಷ್ಕರಣೆ?; ಪಿಎಫ್ ಖಾತೆ ಹೊಂದಿರುವವರು ತಮ್ಮ ಹಣದ ರಿಟೈರ್‌ಮೆಂಟ್ ಪ್ಲಾನಿಂಗ್ ಅನ್ನು ಹೇಗೆ ಮಾಡಬೇಕು? ಎಂದು ಆಯ್ಕೆಯನ್ನು ನೀಡಲಾಗುತ್ತದೆ.
ಅಲ್ಲದೇ 10 ವರ್ಷಗಳಿಗೊಮ್ಮೆ ಚಂದಾದಾರರು ಶೇ 60ರಷ್ಟು ಹಣವನ್ನಾದರೂ ಪಡೆಯಲು ಅವಕಾಶ ಕೊಡಲಾಗುತ್ತದೆ. ಹಲವಾರು ಉದ್ಯೋಗಿಗಳು ಪಿಎಫ್ ಹಣದ ಮೇಲೆ ಅವಲಂಬಿತರಾಗಿದ್ದು, ಅವರಿಗೆ ಈ ನಿಯಮ ಅನುಕೂಲವಾಗಲಿದೆ.
ಈಗಲೂ ಪಿಎಫ್ ಹಣ ವಾಪಸ್ ಪಡೆಯಲು ನಿವೃತ್ತಿ ತನಕ ಕಾಯಬೇಕಿಲ್ಲ. ಆರೋಗ್ಯ, ವಿವಾಹ, ಮನೆ ನಿರ್ಮಾಣ ಕಾರಣಗಳಿಗೆ ಖಾತೆಯಿಂದ ತುರ್ತಾಗಿ ಹಣ ಪಡೆಯಲು ಅವಕಾಶವಿದೆ. ಆದರೆ ಈಗ ಇನ್ನಷ್ಟು ನಿಯಮಗಳನ್ನು ಸರಳೀಕರಣಗೊಳಿಸಲು ಸರ್ಕಾರ ಮುಂದಾಗಿದೆ.
ಇಪಿಎಫ್‌ನಲ್ಲಿ ಸದ್ಯ ಶೇ 8.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತಿದೆ. ಇಪಿಎಫ್ ಖಾತೆಯಲ್ಲಿ ಇರುವ ಹಣ 25 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 5 ವರ್ಷ ಪಿಎಫ್ ಖಾತೆಯಿಂದ ಯಾವುದೇ ಹಣ ವಾಪಸ್ ಪಡೆಯದಿದ್ದರೆ ಶೇ 90ರಷ್ಟು ಹಣವನ್ನು ಮನೆ ನಿರ್ಮಾಣಕ್ಕೆ ಪಡೆಯುವ ನಿಯಮ ಈಗಾಗಲೇ ಇದೆ, ಇದನ್ನು ಈಗ 3 ವರ್ಷಕ್ಕೆ ಪರಿಷ್ಕರಣೆ ಮಾಡಲಾಗಿದೆ.
ಮನಿ ಕಂಟ್ರೋಲ್ ವರದಿ ಪ್ರಕಾರ 10 ವರ್ಷಗಳಿಗೆ ಒಮ್ಮೆ ಪಿಎಫ್ ಹಣ ಪಡೆಯಲು ಉದ್ಯೋಗಿ ಯಾವುದೇ ಕಾರಣ ನೀಡಬೇಕಿಲ್ಲ. ಅಲ್ಲಿರುವ ಹಣವನ್ನು ಪಡೆದು ಬೇರೆ ಕಡೆ ಹೂಡಿಕೆ ಮಾಡಬಹುದು. ಈ ನಿಯಮ ಇನ್ನೂ ಕರಡು ಹಂತದಲ್ಲಿದ್ದು, ಸರ್ಕಾರದ ಅಂತಿಮ ಒಪ್ಪಿಗೆ ಸಿಕ್ಕಿಲ್ಲ.
ಈ ನಿಯಮ ಜಾರಿಗೆ ಬಂದರೆ ಉದ್ಯೋಗಿಗಳು ಹಲವು ಬಾರಿ ಪಿಎಫ್ ಹಣ ವಾಪಸ್ ಪಡೆಯಲು ಅವಕಾಶ ಸಿಗಲಿದೆ. ಸದ್ಯ 7.4 ಕೋಟಿ ಉದ್ಯೋಗಿಗಳು ಖಾತೆ ಹೊಂದಿದ್ದಾರೆ. ಕೇಂದ್ರ ಸರ್ಕಾರ ಪಿಎಫ್ ಹಣವನ್ನು ಎಟಿಎಂ ಮೂಲಕ ವಾಪಸ್ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದೆ. ಈ ಕುರಿತು ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದೆ.
ಪಿಎಫ್ ಹಣವನ್ನು ನಿವೃತ್ತಿಯ ನಂತರದ ಜೀವನಕ್ಕಾಗಿ ಎಂದು ಉದ್ಯೋಗಿಗಳು ಮೀಸಲಿಟ್ಟಿರುತ್ತಾರೆ. ಉದ್ಯೋಗಿಗಳ ವೇತನ ಕಡಿತ ಮತ್ತು ಕಂಪನಿಯ ಕೊಡುಗೆ ಸೇರಿ ಪಿಎಫ್ ಖಾತೆಗೆ ಹಣ ಜಮೆಯಾಗುತ್ತಿರುತ್ತದೆ. ಆದರೆ ಈಗ ಉದ್ಯೋಗಿಗಳು ತುರ್ತು ಸಮಯಕ್ಕೆ ಅಗತ್ಯವಿದೆ ಎಂದು ಪಿಎಫ್ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ.