ತಾರಾತಿಗಡಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಸುಂದರ ಸಾಮಾಜಿಕ ನಾಟಕವನ್ನು ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ. ಹತ್ತು ದಿನಗಳ ಕಾಲ ಮುಂಜಾನೆಯಿಂದ ಸಂಜೆಯವರೆಗೆ ನಡೆಯುತ್ತಿರುವ ಈ ನಾಟಕವು ಏಳು ಕೋಟಿ ಜನರನ್ನು ರಂಜಿಸಲಿದೆ.
ಇದರಲ್ಲಿ ಬರುವ ಎಲ್ಲ ಪಾತಗಳು ಕೇವಲ ಕಾಲ್ಪನಿಕ ಎಂದು ಮೇಷ್ಟ್ರು ಚಾದರ್ ಅವರು ಹೇಳಿದ್ದರೂ ಜನರು ಮಾತ್ರ ಯಾವುದೇ ನಂಬುತ್ತಿಲ್ಲ. ನಾಟಕದಲ್ಲಿ ಚೇರ್ ಚೇಂಜ್ ಮಾಡ್ತಾರೇನಪ್ಪ- ನೀ ಸುಮೆ ಕೂಡ್ತೀಯೇನಪ್ಪ ಎಂಬ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವ ಸಾಧ್ಯತೆ ಇದೆ.
ತಬಲಾ ಮಾಸ್ಟರ್ ಪಸೋಕ್ ಕೆಲವೊಂದು ಬಾರಿ ತಪ್ಪು ತಾಳ ಹಾಕುತ್ತಾರೆ ಎಂದು ಪಾತ್ರಧಾರಿ ಗುಜೇಂದ್ರ ಆರೋಪಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಗುತ್ನಾಳ್ ತನಗೆ ಕೊಟ್ಟ ಡೈಲಾಗ್ ಬೇರೆ ರೀತಿಯಿಂದ ಹೇಳಿದಾಗ ಎಲ್ಲರೂ ಗಾಬರಿಮಾರಿಯಿಂದ ನೋಡಿ ಸುಮ್ಮನಾಗುತ್ತಾರೆ.
ಇನ್ನು ಬಂಡೇಸಿ ನನಗೆ ಅಲ್ಲಿ ನಾಟಕ… ಇಲ್ಲಿ ನಾಟಕ… ಇದೇ ನಾಟಕ ರಂಗ…ನೀವೆಲ್ಲರೂ ಪಾತ್ರಧಾರಿಗಳು ಎಂದು ನಾಟಕದ ನಾಯಕನ ಕಡೆ ಕೈ ತೋರಿಸಿದಾಗ…ಆತ ಗಹಗಹಿಸಿ ನಗುವ ದೃಶ್ಯದಿಂದ ಚಳಿಯಲ್ಲಿಯೂ ಬೆವರೊಡೆದು ಹೋಗುತ್ತಾರೆ.
ಇನ್ನು ಹಾಸ್ಯಪಾತ್ರಗಳಂತೂ ಕೇಳಲೇಬೇಡಿ..ಆ ಕಡೆ-ಈ ಕಡೆ ಎರಡೂ ಕಡೆಯಲ್ಲಿ ಹಾಸ್ಯ ಪಾತ್ರಧಾರಿಗಳು ಡೈಲಾಗ್ ಹೊಡೆಯುತ್ತಿದ್ದರೆ…ನೋಡಿದವರೆಲ್ಲ ಒನ್ಸ್ ಮೋರ್..ಒನ್ಸ್ ಮೋರ್ ಎಂದು ಒದರುತ್ತಾರೆ….ಸೋಮವಾರ ಮೊದಲನೇ ದಿನ ಅಷ್ಟೊಂದು ಮಜಾ ಇರಲಿಲ್ಲ… ಮಂಗಳವಾರದಿಂದ ಹತ್ತು ದಿನಗಳ ಕಾಲ… ಕುಂದಾ ತಿನ್ನಿರಿ ನಾಟಕ ನೋಡಿರಿ.























