ಅಮರಾವತಿ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಪ್ರಮುಖವಾದ ಅಪ್‌ಡೇಟ್ ಒಂದಿದೆ. ನೀವು ಅಂದು ಬೆಳಗ್ಗೆ ದೇವರ ದರ್ಶನದ ಟಿಕೆಟ್ ಪಡೆದು, ಸಂಜೆಯೇ ದರ್ಶನ ಪಡೆಯುವ ಮಾದರಿಯಲ್ಲಿ ನಿಯಮವನ್ನು ಟಿಟಿಡಿ ಬದಲಾವಣೆ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಆದರೆ ಈ ನಿಯಮ ಶ್ರೀವಾಣಿ ವಿಐಪಿ ದರ್ಶನದ ವಿಶೇಷ ಸೇವೆಗೆ ಮಾತ್ರ ಸೀಮಿತವಾಗಿದೆ.
ಭಕ್ತರು ಹೆಚ್ಚು ಹೊತ್ತು ಕಾಯಲು ಸಾಧ್ಯವಿಲ್ಲದಿದ್ದರೆ ಅವರಿಗೆ ತ್ವರಿತವಾಗಿ ದೇವರ ದರ್ಶನ ಮಾಡಿಸಲು ಟಿಟಿಡಿ ಶ್ರೀವಾಣಿ ವಿಐಪಿ ದರ್ಶನ ಸೇವೆ ಪ್ರಾರಂಭಿಸಿತ್ತು. ಇದಕ್ಕಾಗಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಬೇಕಿತ್ತು.
ಆದರೆ ಈಗ ನಿಯಮ ಬದಲಾವಣೆ ಮಾಡಲಾಗಿದೆ. ನೀವು ಅಂದು ಬೆಳಗ್ಗೆ ಆಫ್‌ಲೈನ್ ಟಿಕೆಟ್ ಪಡೆದು ಸಂಜೆಯೇ ದರ್ಶನ ಮಾಡಿಕೊಂಡು ವಾಪಸ್ ಆಗಬಹುದು. ಈ ನಿಯಮದ ವಿವರ ಇಲ್ಲಿದೆ ನೋಡಿ.
ಶ್ರೀವಾಣಿ ವಿಐಪಿ ದರ್ಶನ: ಅಂದೇ ಶ್ರೀವಾಣಿ ವಿಐಪಿ ದರ್ಶನ ಎಂಬ ಹೆಸರಿನಲ್ಲಿ ಈ ನಿಯಮ ಬದಲಾವಣೆ ಮಾಡಲಾಗಿದೆ. ತ್ವರಿತ, ಸುಲಭ ಮತ್ತು ಅದೇ ದಿನ ಎಂಬ ಕಲ್ಪನೆಯಲ್ಲಿ ಈ ಮಾದರಿ ಟಿಕೆಟ್ ಪರಿಚಯಿಸಲಾಗಿದೆ.
ಇನ್ನು ಮುಂದೆ ಶ್ರೀವಾಣಿ ವಿಐಪಿ ದರ್ಶನಕ್ಕೆ ಬೇಗ ಬರುವ, ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲ. ಹೊಸ ಶ್ರೀವಾಣಿ ವಿಐಪಿ ದರ್ಶನ ಟಿಕೆಟ್ ನಿಯಮದ ಪ್ರಕಾರ ಬೆಳಗ್ಗೆ ಕ್ಷೇತ್ರಕ್ಕೆ ಆಗಮಿಸಿ ಅಂದೇ ದರ್ಶನ ಮಾಡಿಕೊಂಡು, ವಾಪಸ್ ಆಗಬಹುದು.
ನೀವು ದರ್ಶನ ಮಾಡಬೇಕಾದ ದಿನವೇ ತಿರುಮಲದಲ್ಲಿ 10 ಗಂಟೆ ಸುಮಾರಿಗೆ ಟಿಕೆಟ್ ಪಡೆದುಕೊಳ್ಳಿ. ಅಂದು ಸಂಜೆ 4.30ರ ವೇಳೆಗೆ ನೀವು ದರ್ಶನವನ್ನು ಮಾಡಬಹುದು. ವೈಕುಂಠ ಕ್ಯೂ ಕಾಂಪ್ಲೆಕ್ಸ್-1ರಲ್ಲಿ ನೀವು ದರ್ಶನಕ್ಕೆ ಕಾಯಬೇಕಿದೆ. ರೇಣಿಗುಂಟ ಏರ್‌ಪೋರ್ಟ್‌ನಲ್ಲಿಯೂ ಬೆಳಗ್ಗೆ 7 ಗಂಟೆಗೆ ಶ್ರೀವಾಣಿ ವಿಐಪಿ ದರ್ಶನದ ಟಿಕೆಟ್ ಸಿಗಲಿದೆ.
ಶ್ರೀವಾಣಿ ವಿಐಪಿ ದರ್ಶನಕ್ಕಾಗಿಯೇ ತಡರಾತ್ರಿ ಆಗಮಿಸಿ, ವಾಸ್ತವ್ಯ ಹೂಡುವ. ಮುಂಜಾನೆಯೇ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಮಾಡಲು ಈ ನಿಯಮ ಜಾರಿಗೊಳಿಸಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ. ಈ ವ್ಯವಸ್ಥೆ ಆಗಸ್ಟ್ 1, 2025ರಿಂದ ಜಾರಿಗೆ ಬರಲಿದೆ.
ಆಗಸ್ಟ್ 1ರಿಂದ ಜಾರಿಗೆ ಬರುವಂತೆ ತಿರುಪತಿಯಲ್ಲಿ ಇನ್ನೂ ಕೆಲವು ಬದಲಾವಣೆಗಳಿವೆ. ದಿವ್ಯಾನುಗ್ರಹ ಹೋಮ ಟಿಕೆಟ್ ಆಫ್‌ಲೈನ್‌ನಲ್ಲಿ ಇನ್ನು ಮುಂದೆ ಲಭ್ಯವಿಲ್ಲ. ಆನ್‌ಲೈನ್ ಪೋರ್ಟಲ್ ಮೂಲಕವೇ ಈ ಟಿಕೆಟ್ ಬುಕ್ ಮಾಡಬೇಕಿದೆ.
1,600 ರೂ. ಟಿಕೆಟ್ ಪಡೆದರೆ ಇಬ್ಬರು ಹೋಮದಲ್ಲಿ ಪಾಲ್ಗೊಳ್ಳಬಹುದು. ಈ ಟಿಕೆಟ್ 300 ರೂ.ಗಳ ವಿಶೇಷ ದರ್ಶನವನ್ನು ಸಹ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ತಿರುಪತಿಗೆ ಆಗಮಿಸುತ್ತಾರೆ. ಸಾಲು ಸಾಲು ರಜೆಗಳು ಇದ್ದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ವಾರಾಂತ್ಯದಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಈ ವಾರಾಂತ್ಯದಿಂದ ದರ್ಶನದ ನಿಯಮ ಬದಲಾಗುತ್ತಿದ್ದು, ಅದನ್ನು ತಿಳಿದು ಪ್ರಯಾಣಿಸಿ.