ಬಾಗಲಕೋಟೆ: ಬಡಕುಟುಂಬದಲ್ಲಿ ಜನಿಸಿದ ಬಾಲಕಿಯೊಬ್ಬಳ ಕಲಿಕೆಗೆ ಅಡ್ಡಿಯಾದ ಬಡತನವನ್ನು ಬದಿಗೊತ್ತಲು ಕ್ರಿಕೆಟಿಗ ರಿಷಬ್ ಪಂತ್ ಮುಂದಾಗಿದ್ದಾರೆ. ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದರೂ ಪದವಿ ಪ್ರವೇಶಾತಿಗೆ ಹಣವಿಲ್ಲದೇ ಪರದಾಡುತ್ತಿದ್ದ ವಿದ್ಯಾರ್ಥಿನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ ನೆರವಾಗಿದ್ದಾರೆ.
ಬೀಳಗಿ ತಾಲೂಕಿನ ಚವಡಾಪುರ ರಬಕವಿ ಗ್ರಾಮದ ಕು. ಜ್ಯೋತಿ ಕಣಬೂರ ಪಿಯುಸಿಯಲ್ಲಿ ಶೇ. 83 ಅಂಕ ಗಳಿಸಿದ್ದಳು. ಆಕೆ ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕದಾದ ಚಹಾ ಅಂಗಡಿ ನಡೆಸುತ್ತಿದ್ದು, ಮಗಳ ಕಲಿಕೆಗೂ ಪರದಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಗ್ರಾಮದವರೇ ಆದ ವಿಜಯಪುರದ ಗುತ್ತಿಗೆದಾರ ಅನಿಲ ಹುಣಶಿಕಟ್ಟಿ ಅವರನ್ನು ಜಮಖಂಡಿ ಬಿಎಲ್‌ಡಿಇ ಸಂಸ್ಥೆಯ ಕಾಲೇಜಿನಲ್ಲಿ ಬಿಸಿಎಗೆ ಸೀಟ್ ಕೊಡಿಸುವಂತೆ ಕೋರಿಕೊಂಡಿದ್ದರು.
ಸೀಟ್ ಕೊಡಿಸುವ ಜತೆಗೆ ಆರ್ಥಿಕ ನೆರವು ಒದಗಿಸುವುದಕ್ಕೂ ಪ್ರಯತ್ನಿಸುವ ಭರವಸೆ ನೀಡಿದ ಅನಿಲ್ ಅವರು ರಿಷಬ್ ಪಂತ್ ಅವರಿಗೆ ಆತ್ಮೀಯರಾಗಿರುವ ತಮ್ಮ ಬೆಂಗಳೂರಿನ ಸ್ನೇಹಿತ ಅಕ್ಷಯ ನಾಯಕ ಅವರನ್ನು ಸಂಪರ್ಕಿಸಿದ್ದರು. ಅಕ್ಷಯ ಅವರು ರಿಷಬ್ ಅವರ ಗಮನಕ್ಕೆ ತಂದಾಗ ಕೂಡಲೇ ನೆರವಿಗೆ ಬಂದಿರುವ ರಿಷಬ್ ಜು. 17ರಂದು ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ವಿದ್ಯಾರ್ಥಿನಿ ಜ್ಯೋತಿಯ ಮೊದಲ ಸೆಮಿಸ್ಟರ್‌ನ 40 ಸಾವಿರ ರೂ.ಗಳ ಶುಲ್ಕವನ್ನು ಪಂತ್ ಭರಿಸಿದ್ದಾರೆ.
ಅಕ್ಷಯ ನಾಯಕ್ ಹಾಗೂ ಅನಿಲ್ ಹುಣಸಿಕಟ್ಟಿ ಅವರು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಸಹಪಾಠಿಗಳಾಗಿದ್ದು, ಬಹುತೇಕ ಕ್ರಿಕೆಟಿಗರಿಗೆ ಅಕ್ಷಯ ಆಪ್ತರಾಗಿದ್ದಾರೆ. ಹಿಂದೊಮ್ಮೆ ವಿದ್ಯಾರ್ಥಿಯೊಬ್ಬರಿಗೆ ಕೆ.ಎಲ್. ರಾಹುಲ್ ಮೂಲಕ 1 ಲಕ್ಷ ರೂ. ಗಳ ಶುಲ್ಕವನ್ನು ಅಕ್ಷಯ ಭರಿಸಿದ್ದರಂತೆ. ಅದನ್ನು ನೆನಪಿಸಿಕೊಂಡ ಅನಿಲ ಈ ವಿದ್ಯಾರ್ಥಿನಿಗೂ ಯಾರಾದರೂ ನೆರವಾಗಬಹುದೇ ಎಂದು ಕೋರಿದಾಗ ಕಾಲೇಜಿನ ಖಾತೆಗೆ ನೇರವಾಗಿ ರಿಷಬ್ ಪಂತ್ ಹಣ ವರ್ಗಾಯಿಸಿದ್ದಾರೆ.
ಬಹುಪಾಲು ಕ್ರಿಕೆಟಿಗರು ಕಷ್ಟದಿಂದಲೇ ಮೇಲೆ ಬಂದಿರುತ್ತಾರೆ. ಇನ್ನೊಬ್ಬರ ಕಷ್ಟ ಅರಿತು ನೆರವಾಗುವುದನ್ನು ರೂಢಿಸಿಕೊಂಡಿರುತ್ತಾರೆ. ಆ ಸಾಲಿಗೆ ರಿಷಬ್ ಪಂತ್ ಕೂಡ ಸೇರ್ಪಡೆಗೊಂಡಿದ್ದು, ಹೆಸರೇ ಕೇಳದ ಗ್ರಾಮದ ವಿದ್ಯಾರ್ಥಿನಿಗೆ ಯಾವುದೇ ಅಪೇಕ್ಷೆ ಇಲ್ಲದೆ ಪಂತ್ ನೆರವಾಗುವುದರ ಮೂಲಕ ಗಮನಸೆಳೆದಿದ್ದಾರೆ.
ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಆಕೆಯ ಮೂರು ವರ್ಷದ ಶಿಕ್ಷಣಕ್ಕೂ ನೆರವಾಗುವಂತೆ ಕೋರಲಾಗಿದೆ. ಆ ಬಗ್ಗೆ ಈಗಲೇ ಖಚಿತಪಡಿಸುವುದು ಕಷ್ಟ ಎಂದು ಅನಿಲ ಹುಣಸಿಕಟ್ಟಿ `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.
ಕೆ.ಎಲ್. ರಾಹುಲ್ ನೆರವು: ಕರ್ನಾಟಕ ಕ್ರಿಕೆಟ್ ರಂಗದಿಂದ ಬೆಳೆದು ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್. ರಾಹುಲ್ ಕೂಡ ಹಿಂದೊಮ್ಮೆ ಸೃಷ್ಟಿ ಕುಲಾವಿ ಎಂಬ ಬಾಲಕಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದರು.
ಧಾರವಾಡದ ಸಿದ್ಧೇಶ್ವರ ಕಾಲೋನಿಯ ನಿವಾಸಿ ಹನುಮಂತಪ್ಪ ಹಾಗೂ ಸುಮಿತ್ರಾ ದಂಪತಿಯ ಮಗಳು ಸೃಷ್ಟಿಗೆ ಭವಿಷ್ಯದಲ್ಲಿ ಡಾಕ್ಟರ್ ಆಗುವ ಕನಸು. ಆದರೆ, ಬಡತನ ಶಾಪವಾಗಿತ್ತು. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಬಾಲಕಿಯ ಓದಿನ ಹಂಬಲ ಕಂಡ ಸ್ಥಳೀಯ ಸಮಾಜಸೇವಕ ಮಂಜುನಾಥ ಹೆಬಸೂರ ಅವರು ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿಸಿದ್ದರು.
ಧಾರವಾಡದ `ದಿ ಗ್ಲೋಬಲ್ ಎಕ್ಸಲೆನ್ಸ್ ಶಾಲೆ’ಯಲ್ಲಿ ಸೃಷ್ಟಿ ಕುಲಾವಿ ವ್ಯಾಸಂಗ ಮಾಡಲು ಕೆ.ಎಲ್. ರಾಹುಲ್ ಅವರು ನೆರವು ನೀಡಿದ್ದಾರೆ. ಸದಾಕಾಲ ಕ್ರಿಕೆಟ್‌ನಲ್ಲಿ ಬ್ಯೂಸಿ ಇರುವ ಕೆ.ಎಲ್. ರಾಹುಲ್, ಪ್ರತಿಭಾವಂತರ ಓದಿಗೆ 21 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ಬಾಲಕಿಯ 1ನೇ ತರಗತಿಗೆ ಅಡ್ಮಿಷನ್ ಮಾಡಿಸಿದ್ದರು.