ನವದೆಹಲಿ: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಚೀನಾ 2,000 ಕಿಲೋ ಮೀಟರ್‌ಗಿಂತಲೂ ಅಧಿಕ ಭೂ ಪ್ರದೇಶವನ್ನು ಕಬಳಿಸಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಸುಪ್ರೀಂಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. “ನಿಜವಾದ ಭಾರತೀಯನೊಬ್ಬ ಇದನ್ನೆಲ್ಲಾ ಹೇಳುವುದಿಲ್ಲ” ಎಂದಿರುವ ಕೋರ್ಟ್, ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆ ನೀಡಿದೆ.
ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸುವ ಸಂಧರ್ಭದಲ್ಲಿ 2023ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ “2,000 ಕಿ.ಮೀ. ಪ್ರದೇಶವನ್ನು ಚೀನೀಯರು ವಶಪಡಿಸಿಕೊಂಡಿದ್ದಾರೆಂದು ನಿಮಗೆ ಹೇಗೆ ಗೊತ್ತಾಯಿತು?” ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಅಲ್ಲದೆ “ನೀವು ನಿಜವಾದ ಭಾರತೀಯರಾಗಿದ್ದರೆ, ಅದನ್ನು ಹೇಳುತ್ತಿರಲಿಲ್ಲ. ಇಂತಹ ಸೂಕ್ಷ್ಮ ವಿಚಾರವನ್ನು ಹೇಳುವಾಗ ಮಾಹಿತಿ ಇಲ್ಲದೆ ಹೇಳಬೇಡಿ” ಎಂದು ಕೋರ್ಟ್ ಎಚ್ಚರಿಸಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ಪೀಠವು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿತು, “ನೀವು ವಿರೋಧ ಪಕ್ಷದ ನಾಯಕರಾಗಿರುವಾಗ, ಈ ರೀತಿ ಏಕೆ ಹೇಳುತ್ತೀರಿ?. ನೀವು ಸಂಸತ್ತಿನಲ್ಲಿ ಈ ಪ್ರಶ್ನೆಗಳನ್ನು ಏಕೆ ಕೇಳುವುದಿಲ್ಲ?” ಎಂದು ಪ್ರಶ್ನೆ ಮಾಡಿದೆ.
ಕಳೆದ ಮೇ 29 ರಂದು ಅಲಹಾಬಾದ್ ಹೈಕೋರ್ಟ್ ಸಮನ್ಸ್ ಆದೇಶ ಮತ್ತು ಕ್ರಿಮಿನಲ್ ದೂರನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನಂತರ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದ್ದು, ದುರುದ್ದೇಶಪೂರಿತ ಉದ್ದೇಶದಿಂದ ದಾಖಲಿಸಲಾಗಿದೆ ಎಂದು ವಾದಿಸಿದ್ದರು.
ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ವಾಕ್ ಸ್ವಾತಂತ್ರ್ಯವು ಸೇನೆಯನ್ನು ಮಾನಹಾನಿ ಮಾಡುವವರೆಗೆ ವಿಸ್ತರಿಸುವುದಿಲ್ಲ ಎಂದು ಹೇಳಿತ್ತು. ದೂರುದಾರ, ಉದಯ್ ಶಂಕರ್ ಶ್ರೀವಾಸ್ತವ ಅವರು, ಡಿಸೆಂಬರ್ 2022 ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿಯವರು ಭಾರತೀಯ ಸೇನೆಯ ವಿರುದ್ಧ ಹಲವಾರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು.
ಭಾರತದ 2,000 ಚದರ ಕಿಲೋಮೀಟರ್ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ಗಾಂಧಿ ಹೇಳಿಕೆಯನ್ನು ಪೀಠ ಪ್ರಶ್ನಿಸಿತು. ಮಾಜಿ BRO ನಿರ್ದೇಶಕರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆ ನೀಡಿದ್ದರೂ, ಅಲಹಾಬಾದ್ ಹೈಕೋರ್ಟ್ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿದ್ದರ ವಿರುದ್ಧ ಗಾಂಧಿ ಅರ್ಜಿಯ ಕುರಿತು ನ್ಯಾಯಾಲಯವು ನೋಟಿಸ್ ಜಾರಿ ಮಾಡಿತು. 3 ವಾರಗಳ ಕಾಲ ಮಧ್ಯಂತರ ತಡೆಯಾಜ್ಞೆ ನೀಡಲಾಯಿತು. ಇದಕ್ಕೂ ಮೊದಲು, ಮೇ 29 ರಂದು, ಮಾನನಷ್ಟ ಮೊಕದ್ದಮೆಯ ವಿರುದ್ಧ ರಾಹುಲ್ ಗಾಂಧಿ ಅರ್ಜಿ ಮತ್ತು ಲಕ್ನೋ ಸಂಸದ/ ಶಾಸಕ ನ್ಯಾಯಾಲಯದ ಫೆಬ್ರವರಿ 2025ರ ಸಮನ್ಸ್ ಆದೇಶವನ್ನು ಹೈಕೋರ್ಟ್ ತಿರಸ್ಕರಿಸಿತ್ತು.
2020ರ ಗಾಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗಿನ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗಾಗಿ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.