Home Advertisement
Home ಸುದ್ದಿ ರಾಜ್ಯ April 1 ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ ಸಂದೇಶ

April 1 ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ ಸಂದೇಶ

0
49

ಉಪಚುನಾವಣೆ ಹೊತ್ತಲ್ಲಿ ಉಪೇಂದ್ರ Digital ರಾಜಕೀಯ ಪ್ರಯೋಗ

ಬೆಂಗಳೂರು: ನಟ, ನಿರ್ದೇಶಕ ಹಾಗೂ ರಾಜಕಾರಣಿಯಾಗಿರುವ ಉಪೇಂದ್ರ ಅವರು ತಮ್ಮ ‘ಪ್ರಜಾಕೀಯ’ ರಾಜಕೀಯ ಚಳವಳಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಏಪ್ರಿಲ್ 1ರ ‘ಮೂರ್ಖರ ದಿನ’ದ ಹಿನ್ನೆಲೆಯಲ್ಲಿ ವಿಭಿನ್ನ ಸಂದೇಶ ನೀಡಿದ ಅವರು, ಈ ದಿನವನ್ನು “ಬುದ್ಧಿವಂತರ ದಿನ”ವನ್ನಾಗಿ ಆಚರಿಸೋಣ ಎಂದು ಕರೆ ನೀಡಿದ್ದಾರೆ.

‘ದಿ ರಿಯಲ್ ಪ್ರಜಾಕೀಯ’ (The Real Prajaakeeya) ಎಂಬ ಆನ್‌ಲೈನ್ ಆಪ್ ಅನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ರಾಜಕೀಯದಲ್ಲಿ ಜನರ ಪಾತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನವನ್ನು ಪರಿಚಯಿಸಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ 1ರಂದು ಜನರನ್ನು ಮೋಸಗೊಳಿಸುವ ದಿನವೆಂದು ಕರೆಯಲಾಗುತ್ತದೆ. ಆದರೆ “ಒಬ್ಬರ ಕಾಲ್ ಇನ್ನೊಬ್ಬರು ಎಳೆಯುವ ದಿನವಲ್ಲ, ಕೈ ಹಿಡಿದು ಮೇಲೆತ್ತುವ ದಿನವಾಗಲಿ” ಎಂಬ ಸಂದೇಶದ ಮೂಲಕ ಉಪೇಂದ್ರ ವಿಭಿನ್ನ ಚಿಂತನೆ ಹೊರಹಾಕಿದರು.

ಈ ಹೊಸ ಆಪ್ ಮೂಲಕ ಜನರು ತಮ್ಮ ನಾಯಕರನ್ನು ಹೇಗೆ ಆಯ್ಕೆ ಮಾಡಬೇಕು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯಬೇಕು, ಹಾಗೂ ಟಿಕೆಟ್ ಬಯಸುವವರು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ ವಿವರಿಸಲಾಗಿದೆ. ಜನಸಾಮಾನ್ಯರೇ ರಾಜಕೀಯ ವ್ಯವಸ್ಥೆಯಲ್ಲಿ ನೇರವಾಗಿ ಭಾಗವಹಿಸುವಂತೆ ಮಾಡುವುದೇ ಈ ಆಪ್‌ನ ಮುಖ್ಯ ಉದ್ದೇಶವಾಗಿದೆ.

ಇದೇ ವೇಳೆ, 2026ರ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, “ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಂದ ಕೆಲಸ ಮಾಡಿಸಿಕೊಳ್ಳಲು ಸಿದ್ಧರಾಗಿದ್ದರೆ ಮಾತ್ರ ಮತ ಚಲಾಯಿಸಿ” ಎಂದು ಉಪೇಂದ್ರ ಕರೆ ನೀಡಿದ್ದಾರೆ. “ನಂಬಿಕೆಗೆ ಒಂದೇ ನೆಲೆ, ಸತ್ಯ ಒಂದೇ ಆಯುಧ” ಎಂಬ ಸಂದೇಶವನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.

‘The Real Prajaakeeya’ ಆಪ್ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ಮಾಡುವ ಪ್ರಯತ್ನ ಇದಾಗಿದೆ. ಉಪಚುನಾವಣೆ ಹಿನ್ನೆಲೆ ಪ್ರಜಾಕೀಯ ಚಳವಳಿ ಚುರುಕುಗೊಂಡಿದ್ದು ಯುವ ಮತದಾರರನ್ನು ಆಕರ್ಷಿಸುವತ್ತ ಉಪೇಂದ್ರ ವಿಶೇಷ ಒತ್ತು ನೀಡಿದ್ದಾರೆ.