Home Advertisement
Home ಸುದ್ದಿ ರಾಜ್ಯ SSLC ಪರೀಕ್ಷೆ: 625ಕ್ಕೆ ಬದಲು 525ಕ್ಕೆ ನಿಗದಿ – ತೃತೀಯ ಭಾಷೆಗೆ ಗ್ರೇಡ್ ಪದ್ದತಿ

SSLC ಪರೀಕ್ಷೆ: 625ಕ್ಕೆ ಬದಲು 525ಕ್ಕೆ ನಿಗದಿ – ತೃತೀಯ ಭಾಷೆಗೆ ಗ್ರೇಡ್ ಪದ್ದತಿ

0
209

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಹತ್ವದ ಬದಲಾವಣೆಯನ್ನು ಶಿಕ್ಷಣ ಇಲಾಖೆ ಘೋಷಿಸಿದ್ದು, ಇನ್ಮುಂದೆ ತೃತೀಯ ಭಾಷೆಯ ಅಂಕಗಳನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸದಿರಲು ನಿರ್ಧಾರ ಕೈಗೊಂಡಿದೆ. ಈ ಕುರಿತು ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.

ಇದುವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ಒಟ್ಟು ಅಂಕಗಳನ್ನು 525ಕ್ಕೆ ಇಳಿಸಲಾಗಿದ್ದು, ತೃತೀಯ ಭಾಷೆಯ ಅಂಕಗಳನ್ನು ಫಲಿತಾಂಶದಿಂದ ಕೈಬಿಡಲಾಗಿದೆ. ಹಿಂದಿ ಸೇರಿದಂತೆ ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಸೇರಿದಂತೆ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ.

ಆದರೆ ತೃತೀಯ ಭಾಷೆಯ ಪರೀಕ್ಷೆಯನ್ನು ಸಂಪೂರ್ಣ ರದ್ದುಪಡಿಸಲಾಗಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಕಡ್ಡಾಯವಾಗಿದ್ದು, ಅಂಕಗಳ ಬದಲು A, B, C, D ಎಂಬ ಗ್ರೇಡ್‌ಗಳನ್ನು ನೀಡಲಾಗುತ್ತದೆ. ಮಾರ್ಚ್ 31ರಂದು ಈ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಈ ಕ್ರಮವು ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಪ್ರಸ್ತುತ ಈ ನಿಯಮ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಇತರೆ ತರಗತಿಗಳ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಒಟ್ಟಾರೆ, ಈ ಹೊಸ ಬದಲಾವಣೆಗಳು ಈ ವರ್ಷದಿಂದಲೇ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡುವ ಜೊತೆಗೆ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವತ್ತ ಸರ್ಕಾರದ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ.