ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಈಗ ಹೊಸದೊಂದು ‘ಭಾಷಾ ಯುದ್ಧ’ ಶುರುವಾಗಿದೆ. ಗಡಿಭಾಗದ ಕನ್ನಡಿಗರ ಹಿತರಕ್ಷಣೆಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಅತ್ಯಂತ ಗಂಭೀರವಾದ ಪತ್ರವೊಂದನ್ನು ಬರೆದಿದ್ದಾರೆ.
ಕೇರಳ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಮಲಯಾಳಂ ಭಾಷಾ ಮಸೂದೆ-2025’ ಈಗ ಈ ಸಂಘರ್ಷಕ್ಕೆ ಕಿಡಿ ಹಚ್ಚಿದೆ.
ಏನಿದು ವಿವಾದ?: ಕೇರಳ ಸರ್ಕಾರವು ತನ್ನ ರಾಜ್ಯದಾದ್ಯಂತ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಈ ಹೊಸ ಮಸೂದೆಯ ಪ್ರಕಾರ, ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಮಲಯಾಳಂ ಅನ್ನು ಮೊದಲ ಭಾಷೆಯನ್ನಾಗಿ ಕಲಿಯುವುದು ಕಡ್ಡಾಯವಾಗಲಿದೆ. ಇದು ತಲೆಮಾರುಗಳಿಂದ ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಗಡಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವ ವಿಷಯವಾಗಿದೆ.
ಸಿದ್ದರಾಮಯ್ಯ ಪತ್ರದ ಸಾರಾಂಶ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ನೆನಪಿಸಿದ್ದಾರೆ. “ಕಾಸರಗೋಡಿನ ಜನರಿಗೆ ಕನ್ನಡ ಕೇವಲ ಭಾಷೆಯಲ್ಲ, ಅದು ಅವರ ಬದುಕಿನ ಅವಿಭಾಜ್ಯ ಅಂಗ. ಬಲವಂತವಾಗಿ ಮತ್ತೊಂದು ಭಾಷೆಯನ್ನು ಹೇರುವುದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾದುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಸಂವಿಧಾನದ ಅನುಚ್ಛೇದ 29, 30 ಮತ್ತು 350ಎ ಅಡಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳನ್ನು ಉಲ್ಲೇಖಿಸಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು, ಅದನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂಬುದು ಸಿದ್ದರಾಮಯ್ಯ ವಾದ.
ರಾಜಕೀಯ ಬಣ್ಣ ಮತ್ತು ಎಚ್ಚರಿಕೆ: ಕೇರಳದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಭಾಷಾ ವಿಷಯಕ್ಕೆ ಈಗ ರಾಜಕೀಯ ಆಯಾಮವೂ ಸಿಕ್ಕಿದೆ. ಬೆಂಗಳೂರಿನ ಕೋಗಿಲು ಕ್ರಾಸ್‌ನಲ್ಲಿ ನಡೆದ ಅಕ್ರಮ ಶೆಡ್ ತೆರವು ವಿಚಾರದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿದ್ದ ಕೇರಳಕ್ಕೆ, ಈಗ ಭಾಷಾ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
“ಒಂದು ವೇಳೆ ಕೇರಳ ಸರ್ಕಾರ ಈ ಮಸೂದೆಯನ್ನು ಹಿಂಪಡೆಯದಿದ್ದರೆ ಅಥವಾ ತಿದ್ದುಪಡಿ ಮಾಡದಿದ್ದರೆ, ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕವು ಎಲ್ಲಾ ಸಾಂವಿಧಾನಿಕ ಹೋರಾಟಕ್ಕೂ ಸಿದ್ಧವಿದೆ” ಎಂದು ಅವರು ಖಡಕ್ ಆಗಿ ತಿಳಿಸಿದ್ದಾರೆ.






















