ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ. ರಾಮಯ್ಯ (93) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.
1933ರ ಸೆಪ್ಟೆಂಬರ್ 12ರಂದು ಜನಿಸಿದ್ದ ರಾಮಯ್ಯ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿ, ನಿಸ್ವಾರ್ಥ ಮತ್ತು ನಿಷ್ಠಾವಂತ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ವಿಶೇಷವಾಗಿ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಕನ್ನಡಿಗರಿಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದರು.
ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ 6 ಚರಣ ಕಡ್ಡಾಯ
ಪತ್ರಿಕೋದ್ಯಮದ ಜೊತೆಗೆ ಸಾರ್ವಜನಿಕ ಜೀವನದಲ್ಲೂ ಸಕ್ರಿಯರಾಗಿದ್ದ ಅವರು, ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ ಜನಸೇವೆ ಮಾಡಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಸದನದಲ್ಲಿ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಸಮರ್ಥವಾಗಿ ಪ್ರಸ್ತಾಪಿಸಿದ್ದರು.
ರಾಮಯ್ಯ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿದ್ದವು. ಅವರು ಪತ್ರಿಕಾ ಅಕಾಡೆಮಿ ಸದಸ್ಯರಾಗಿ ಹಾಗೂ ವಿವಿಧ ಪತ್ರಕರ್ತರ ಕಲ್ಯಾಣ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿ, ಪತ್ರಕರ್ತರ ಹಿತಕ್ಕಾಗಿ ಶ್ರಮಿಸಿದ್ದರು.
ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು, ಸಣ್ಣ ಹಾಗೂ ಗ್ರಾಮೀಣ ಪತ್ರಿಕೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹತ್ವದ ಕೊಡುಗೆ ನೀಡಿದ್ದರು.
ಇದನ್ನೂ ಓದಿ: Digital ಜಗತ್ತಿಗೆ ಹೊಸ ಕಾನೂನು: ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ
ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಸಂದೇಶ ಹಂಚಿಕೊಂಡಿರುವ ಅವರು, “ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ರಾಮಯ್ಯ ಅವರು ನನ್ನ ಹಿತಚಿಂತಕರಾಗಿದ್ದರು. ಪತ್ರಕರ್ತರಾಗಿ ಸದಾ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಿದ್ದರು. ರಾಜಕೀಯ, ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ವಿಷಯಗಳ ಕುರಿತು ಅವರಿಗಿದ್ದ ಜ್ಞಾನ ಮತ್ತು ಅನುಭವ ಬೆರಗುಗೊಳಿಸುತಿತ್ತು” ಎಂದು ಸ್ಮರಿಸಿದ್ದಾರೆ.
ಇದಲ್ಲದೆ, “ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿ ಪತ್ರಿಕಾ ಕ್ಷೇತ್ರಕ್ಕೆ ಮಹತ್ವದ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಮತ್ತೊಂದು ಆದಿಮಾನವನ ಅಸ್ಥಿಪಂಜರ ಪತ್ತೆ – ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ
ರಾಮಯ್ಯ ಅವರ ನಿಧನದಿಂದ ಪತ್ರಿಕೋದ್ಯಮ ಕ್ಷೇತ್ರ ಮತ್ತು ಸಾರ್ವಜನಿಕ ಜೀವನಕ್ಕೆ ಅಪಾರ ನಷ್ಟವಾಗಿದೆ ಎಂದು ಸಹೋದ್ಯೋಗಿಗಳು, ರಾಜಕೀಯ ನಾಯಕರು ಹಾಗೂ ಪತ್ರಕರ್ತ ವಲಯದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಸೊಸೆಯಂದಿರು ಇದ್ದಾರೆ.























