ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರನ್ನು ನಾಮಕರಣ ಮಾಡುವ ಮಹತ್ವದ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮನ್‌ರೇಗಾ (MNREGA) ಯೋಜನೆಯ ಸಮರ್ಪಕ ಜಾರಿಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧೀಜಿ ಹೆಸರಿಡುವ ಮೂಲಕ ಪಂಚಾಯತ್ ವ್ಯವಸ್ಥೆಗೆ ಗೌರವ ಮತ್ತು ಬಲ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹಿರಿಯರ ಬದುಕಿಗೆ ‘ಸ್ಪಂದನ’: ಅರಿವು ಕೇಂದ್ರದಿಂದ ಜೀವನೋತ್ಸಾಹ
ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಗ್ರಾಮ ಪಂಚಾಯಿತಿಗಳನ್ನು ದುರ್ಬಲಗೊಳಿಸುತ್ತಿದ್ದು, ಪಂಚಾಯಿತಿಗಳ ಅಧಿಕಾರವನ್ನು ಕಸಿದುಕೊಂಡು ಬಡವರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಮನ್‌ರೇಗಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ರಾಜ್ಯಪಾಲರಿಗೆ ಮನವಿ ರೂಪದಲ್ಲಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
“ಈ ವಿಚಾರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ. ಅಗತ್ಯವಿದ್ದರೆ ಬಂಧನಕ್ಕೂ ಸಿದ್ಧ. ರಾಜ್ಯಪಾಲರು ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು” ಎಂದು ಅವರು ಹೇಳಿದರು.
ಇದನ್ನೂ ಓದಿ: ʼಜನ ನಾಯಗನ್ʼ ಚಿತ್ರಕ್ಕೆ ಹಿನ್ನಡೆ : ಸದ್ಯಕ್ಕಿಲ್ಲ ಬಿಡುಗಡೆಯ ಗ್ಯಾರೆಂಟಿ
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ದುರುದ್ದೇಶದಿಂದ ವಿಬಿಜಿ ರಾಮ್ ಜಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕಿಡಿಕಾರಿದರು. ಈ ಯೋಜನೆಯಲ್ಲಿ ‘ರಾಮ’ ಎಂಬುದು ಕೇವಲ ಹೆಸರಿನಷ್ಟೇ ಇದ್ದು, ಬಡವರ ಹಿತದ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ವ್ಯಂಗ್ಯವಾಡಿದರು. “ದಶರಥ ರಾಮ, ಕೌಸಲ್ಯ ರಾಮ ಅಥವಾ ಸೀತಾರಾಮ—ಯಾರೂ ಈ ಕಾಯ್ದೆಯಲ್ಲಿ ಕಾಣಿಸುವುದಿಲ್ಲ” ಎಂದು ಅವರು ಟೀಕಿಸಿದರು.
ಬಡವರು, ದಲಿತರು ಮತ್ತು ರೈತರ ಪರ ನಿಜವಾದ ಹೋರಾಟ ನಡೆಸುತ್ತಿರುವ ಪಕ್ಷ ಕಾಂಗ್ರೆಸ್ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು. ಬಡವರ ಪರದ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿದ್ದು, ಇದಕ್ಕೆ ಆರ್‌ಎಸ್‌ಎಸ್ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ
ಮನ್‌ರೇಗಾ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ನೇತೃತ್ವದಲ್ಲಿ ಲೋಕಭವನದಿಂದ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಸಿದರು.
ಈ ಪ್ರತಿಭಟನೆ ಮತ್ತು ಘೋಷಣೆಗಳು ಕೇಂದ್ರ–ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತೀವ್ರತೆ ನೀಡಿವೆ.




















