ಸಾಮಾಜಿಕ ಜಾಲತಾಣದ ಅಪಪ್ರಚಾರಕ್ಕೆ ಕೆಎಂಎಫ್ ಕಠಿಣ ಎಚ್ಚರಿಕೆ: ನಂದಿನಿ ಉತ್ಪನ್ನ ಸುರಕ್ಷಿತ – ಸುಳ್ಳು ವದಂತಿ ವಿರುದ್ಧ ಕ್ರಿಮಿನಲ್ ಕೇಸ್
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಾಲು ಸಹಕಾರಿ ಸಂಸ್ಥೆಯಾಗಿರುವ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಉತ್ಪನ್ನ ಸೇವಿಸಿದರೆ ಕ್ಯಾನ್ಸರ್ ಬರುತ್ತದೆ” ಎಂಬ ವದಂತಿಗೆ ಸಂಬಂಧಿಸಿ ಕೆಎಂಎಫ್ ಆಡಳಿತ ಸ್ಪಷ್ಟನೆ ನೀಡಿದೆ. ಈ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಕೆಎಂಎಫ್ ಉತ್ಪನ್ನಗಳ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಲಾಗಿತ್ತು. ಈ ವಿಡಿಯೋವನ್ನು ಕಂಡು ನಿತ್ಯ ಕೆಎಂಎಫ್ ಉತ್ಪನ್ನಗಳನ್ನು ಬಳಸುವ ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬಾಗಲಕೋಟೆ: ಶಿವಾಜಿ ಮೆರವಣಿಗೆ ವೇಳೆ ಕಲ್ಲುತೂರಾಟ – 8 ಮಂದಿ ಬಂಧನ
“ಕೆಎಂಎಫ್ ಉತ್ಪನ್ನಗಳು ನೈಸರ್ಗಿಕ, ಸುರಕ್ಷಿತ” – ಎಂಡಿ ಸ್ಪಷ್ಟನೆ: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಮಾತನಾಡಿ, “ಕೆಎಂಎಫ್ ಹಾಗೂ ಅದರ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ನೈಸರ್ಗಿಕವಾಗಿ ತಯಾರಾಗುತ್ತವೆ. ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಕೆ ಮಾಡುವುದಿಲ್ಲ. ನಮ್ಮ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಅಪಪ್ರಚಾರ,” ಎಂದು ಸ್ಪಷ್ಟಪಡಿಸಿದರು.
ಇದುವರೆಗೂ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ. ಉತ್ಪನ್ನಗಳು ಎಲ್ಲಾ ಮಾನದಂಡಗಳನ್ನು ಪಾಲಿಸಿ ತಯಾರಿಸಲಾಗುತ್ತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ
ನಂದಿನಿ ಉತ್ಪನ್ನಗಳ ವಿರುದ್ಧ ಅಪಪ್ರಚಾರ – ಕಾನೂನು ಸಮರಕ್ಕೆ ಕೆಎಂಎಫ್ ಸಜ್ಜು: ಸಾಮಾಜಿಕ ಜಾಲತಾಣದಲ್ಲಿ ಡಾ. ಶರಣ್ಯ ಸಂತೋಷ್ ಎಂಬ ಹೆಸರಿನ ಖಾತೆಯಿಂದ ಹಂಚಲಾದ ವಿಡಿಯೋ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು. ಈ ಸಂಬಂಧ ಈಗಾಗಲೇ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಂಡಿ ತಿಳಿಸಿದ್ದಾರೆ.
“ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಬ್ರ್ಯಾಂಡ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದೇವೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಾರಿಗೆ ಮುಷ್ಕರ ವಾಪಸ್: ಸರ್ಕಾರಕ್ಕೆ ಮತ್ತೊಂದು ಡೆಡ್‌ಲೈನ್
ಗ್ರಾಹಕರಿಗೆ ಮನವಿ: ಕೆಎಂಎಫ್ ಉತ್ಪನ್ನಗಳನ್ನು ನಂಬಿಕೆಯಿಂದ ಬಳಕೆ ಮಾಡುತ್ತಿರುವ ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು. “ನಮ್ಮ ಎಲ್ಲಾ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಗೊಳಗಾಗಿ ಮಾರುಕಟ್ಟೆಗೆ ಬರುತ್ತವೆ. ಸಾರ್ವಜನಿಕರು ಆತಂಕಗೊಳ್ಳಬೇಕಾಗಿಲ್ಲ,” ಎಂದು ಬಿ. ಶಿವಸ್ವಾಮಿ ಮನವಿ ಮಾಡಿದ್ದಾರೆ.






















