ಬೆಂಗಳೂರು: ರಾಜ್ಯದಲ್ಲಿ ವ್ಯಕ್ತಿ ಅಥವಾ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಅಮಾನವೀಯ ಪದ್ಧತಿಗೆ ಕಾನೂನುಬದ್ಧ ಕಡಿವಾಣ ಹಾಕುವ ಉದ್ದೇಶದಿಂದ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಅಧಿನಿಯಮ–2025’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಮೂಲಕ ಅಧಿನಿಯಮವು ರಾಜ್ಯಾದ್ಯಂತ ಕಾನೂನಾಗಿ ಜಾರಿಗೊಳ್ಳಲಿದೆ.
ಈ ಮಹತ್ವದ ಬೆಳವಣಿಗೆಯನ್ನು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವ್ಯಕ್ತಿ ಘನತೆ ರಕ್ಷಣೆ, ನಾಗರಿಕರಲ್ಲಿ ಭಾತೃತ್ವವನ್ನು ಉತ್ತೇಜಿಸುವುದು ಹಾಗೂ ಮೂಲಭೂತ ಹಕ್ಕುಗಳನ್ನು ಕಾಪಾಡುವುದು ಈ ಕಾನೂನಿನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಾಂಡೇಲಿ ಹಿರಿಯ ವಕೀಲ ಅಜಿತ್ ನಾಯ್ಕ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಸಾಮಾಜಿಕ ಬಹಿಷ್ಕಾರದಂತಹ ಪದ್ಧತಿಗಳು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಈ ಅಧಿನಿಯಮ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಂಚಾಯಿತಿ, ಸಮಿತಿಗಳಿಗೆ ನಿರ್ಬಂಧ: ಈ ಅಧಿನಿಯಮದ ಪ್ರಕಾರ, ಪಂಚಾಯಿತಿ, ನೋಂದಾಯಿತ ಅಥವಾ ನೋಂದಾಯಿತವಲ್ಲದ, ಔಪಚಾರಿಕ ಅಥವಾ ಅನೌಪಚಾರಿಕ ಯಾವುದೇ ಸಮಿತಿ, ನಿಕಾಯಗಳು ಧರ್ಮ, ಜಾತಿ, ಉಪಜಾತಿ ಅಥವಾ ಸಾಮಾಜಿಕ ಕಾರಣಗಳನ್ನು ಉಲ್ಲೇಖಿಸಿ ಯಾರ ಮೇಲಾದರೂ ಸಾಮಾಜಿಕ ತಾರತಮ್ಯಕ್ಕೆ ದಾರಿ ಮಾಡಿಕೊಡುವಂತೆ ನೇರವಾಗಲಿ ಅಥವಾ ಪರೋಕ್ಷವಾಗಲಿ ಸೂಚನೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ: ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
ಸಾಮಾಜಿಕ ಬಹಿಷ್ಕಾರ ಎಂದರೇನು?: ಅಧಿನಿಯಮದಲ್ಲಿ ಸಾಮಾಜಿಕ ಬಹಿಷ್ಕಾರದ ಅರ್ಥವನ್ನು ಸ್ಪಷ್ಟವಾಗಿ ವಿವರಿಸಲಾಗಿದ್ದು, ಕೆಳಗಿನ ಕ್ರಿಯೆಗಳು ಸಾಮಾಜಿಕ ಬಹಿಷ್ಕಾರವೆಂದು ಪರಿಗಣಿಸಲಾಗುತ್ತದೆ. ತನ್ನ ಸಮುದಾಯದ ವ್ಯಕ್ತಿಯೊಂದಿಗೆ ವ್ಯವಹಾರ, ಕೆಲಸ ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು. ಸಾಮಾಜಿಕ ಅಥವಾ ಧಾರ್ಮಿಕ ಆಚರಣೆ, ಸಮಾರಂಭ, ಸಭೆ, ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯುವುದು.
ಮದುವೆ, ಶವಸಂಸ್ಕಾರ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುವ ಹಕ್ಕನ್ನು ನಿರಾಕರಿಸುವುದು ಶಾಲೆ, ಶಿಕ್ಷಣ ಸಂಸ್ಥೆ, ವೈದ್ಯಕೀಯ ಕೇಂದ್ರ, ಸಮುದಾಯ ಸಭಾಂಗಣ, ಕ್ಲಬ್ ಹಾಲ್, ಸ್ಮಶಾನ ಸೇರಿದಂತೆ ಸಮುದಾಯ ಬಳಸುವ ಸೌಲಭ್ಯಗಳಿಂದ ದೂರಿಡುವುದು. ಸಾಮಾಜಿಕ, ಧಾರ್ಮಿಕ ಅಥವಾ ವೃತ್ತಿಪರ ಸಂಬಂಧ ಕಡಿದುಕೊಳ್ಳಲು ಪ್ರೇರೇಪಿಸುವುದು. ಸಮುದಾಯದ ಮಕ್ಕಳನ್ನು ನಿರ್ದಿಷ್ಟ ಕುಟುಂಬ ಅಥವಾ ಸಮುದಾಯದ ಮಕ್ಕಳೊಂದಿಗೆ ಆಟ ಆಡಲು ತಡೆಯುವುದು. ಈ ಎಲ್ಲ ಕೃತ್ಯಗಳು ಕಾನೂನಿನ ದೃಷ್ಟಿಯಲ್ಲಿ ಸಾಮಾಜಿಕ ಬಹಿಷ್ಕಾರವಾಗುತ್ತವೆ.
ಇದನ್ನೂ ಓದಿ: ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ
ಶಿಕ್ಷೆ ಮತ್ತು ಪರಿಹಾರದ ವ್ಯವಸ್ಥೆ: ಯಾವುದೇ ವ್ಯಕ್ತಿ ತನ್ನ ಸಮುದಾಯದ ಇನ್ನೊಬ್ಬ ವ್ಯಕ್ತಿ ಅಥವಾ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದರೆ, ಅದಕ್ಕೆ ಕಾರಣನಾದರೆ ಅಥವಾ ಅದನ್ನು ಅನುಷ್ಠಾನಗೊಳಿಸಿದರೆ, ಗರಿಷ್ಠ 3 ವರ್ಷಗಳವರೆಗೆ ಕಾರಾವಾಸ ಅಥವಾ ₹1 ಲಕ್ಷವರೆಗೆ ದಂಡ ಅಥವಾ ಎರಡೂ ಸೇರಿ ಶಿಕ್ಷೆ ವಿಧಿಸಬಹುದಾಗಿದೆ.
ಇದಲ್ಲದೆ, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ಅವರ ಹಾಗೂ ನ್ಯಾಯಾಲಯದ ಸಮ್ಮತಿಯೊಂದಿಗೆ ರಾಜಿ (compromise) ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ.
ಅಪರಾಧ ಸಾಬೀತಾಗಿ ದಂಡ ವಿಧಿಸಿದಲ್ಲಿ, ಆರೋಪಿಯಿಂದ ವಸೂಲಾದ ₹1 ಲಕ್ಷ ಅಥವಾ ಅದರ ಒಂದು ಭಾಗವನ್ನು ಸಂತ್ರಸ್ತ ಅಥವಾ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಬಹುದಾಗಿದೆ ಎಂಬ ಅಂಶವೂ ಅಧಿನಿಯಮದಲ್ಲಿ ಅಡಕಗೊಂಡಿದೆ.
ಇದನ್ನೂ ಓದಿ: WPL: ಆರ್‌ಸಿಬಿಗೆ ಸುಲಭ ತುತ್ತಾದ ಯುಪಿ ವಾರಿಯರ್ಸ್
ಮಾನವ ಘನತೆಗೆ ರಕ್ಷಣೆ: ಈ ಅಧಿನಿಯಮವು ಸಮಾಜದಲ್ಲಿ ಬೇರೂರಿರುವ ಅಸಮಾನತೆ, ಭೇದಭಾವ ಮತ್ತು ಬಹಿಷ್ಕಾರದಂತಹ ಪದ್ಧತಿಗಳನ್ನು ತಡೆದು, ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಕಾನೂನು ಕ್ರಮವೆಂದು ಸರ್ಕಾರ ಅಭಿಪ್ರಾಯಪಟ್ಟಿದೆ.





















