AI ಹೊಣೆಗಾರಿಕೆಯುತ ಬಳಕೆ: ಜಾಗತಿಕ ಮುಖಂಡರ ಜೊತೆ ಕರ್ನಾಟಕ ನಿಕಟ ಸಂಪರ್ಕ
ನವದೆಹಲಿ: ನವದೆಹಲಿಯಲ್ಲಿ ನಡೆದ India AI Impact Summit 2026ನಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೃತಕ ಜಾಣ್ಮೆ (AI) ಮತ್ತು ಡೀಪ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ರಾಜ್ಯದ ಸಾಧನೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.
ಶೃಂಗಸಭೆಯ ಸಂದರ್ಭದಲ್ಲಿ ಜಾಗತಿಕ ಉದ್ಯಮ ದಿಗ್ಗಜರು, ಸಂಶೋಧಕರು ಮತ್ತು ನವೋದ್ಯಮ ಸ್ಥಾಪಕರೊಂದಿಗೆ ಸಚಿವರು ವ್ಯಾಪಕ ಸಮಾಲೋಚನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, AI ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದ್ದು, ವಿಶೇಷವಾಗಿ ಬೆಂಗಳೂರು ಜಾಗತಿಕ AI ಪ್ರತಿಭೆಗಳ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಇದನ್ನೂ ಓದಿ: AI ಕ್ಷೇತ್ರದಲ್ಲಿ ₹10 ಲಕ್ಷ ಕೋಟಿ ಹೂಡಿಕೆ – ರಿಲಯನ್ಸ್ ಜಿಯೊ ಘೋಷಣೆ
ಜಾಗತಿಕ ಕಂಪನಿಗಳ ನೆಲೆ: AI ವಲಯದ ಪ್ರಮುಖ ಜಾಗತಿಕ ಕಂಪನಿಗಳಾದ Harvey AI ಮತ್ತು Anthropic ಈಗಾಗಲೇ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೇ ವೇಳೆ The Walt Disney Company ಕೂಡ ಬೆಂಗಳೂರಿನಲ್ಲಿ ತನ್ನ AI ಜಾಲವನ್ನು ವಿಸ್ತರಿಸುತ್ತಿದೆ ಎಂದು ಖರ್ಗೆ ತಿಳಿಸಿದರು. ರಾಜ್ಯ ಸರ್ಕಾರವು 1 ಕೋಟಿ ರೂಪಾಯಿವರೆಗಿನ ಅನುದಾನದ ಮೂಲಕ ನವೋದ್ಯಮಗಳನ್ನು ಪ್ರೋತ್ಸಾಹಿಸುತ್ತಿದ್ದು, ಹೊಣೆಗಾರಿಕೆಯುತ AI ಬಳಕೆಗೆ ಜಾಗತಿಕ ತಜ್ಞರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ AI ಪ್ರಾಯೋಗಿಕ ಬಳಕೆ: ಶೃಂಗಸಭೆಯ ವೇಳೆ ಸುಧಾರಿತ ಎಂಟರ್‌ಪ್ರೈಸ್ AI ಅನ್ನು ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಪ್ರಾಯೋಗಿಕವಾಗಿ ಬಳಸಿಕೊಳ್ಳಲು ‘H’ ಕಂಪನಿ ಮತ್ತು St. John’s Medical College ಹಾಗೂ St. John’s Research Institute ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದಕ್ಕೆ ಸಚಿವರು ಸಾಕ್ಷಿಯಾದರು.
ಇದನ್ನೂ ಓದಿ: ಭಾರತದ AI ಮಂತ್ರವನ್ನು ಜಗತ್ತಿಗೆ ಸಾರಿದ ಮೋದಿ
ಜಾಗತಿಕ ಸಹಯೋಗ ಚರ್ಚೆ: US-India Business Council ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಖರ್ಗೆ ಭಾಗವಹಿಸಿ, ಕರ್ನಾಟಕ ಮತ್ತು ಜಾಗತಿಕ ಉದ್ಯಮಗಳ ನಡುವೆ ತಂತ್ರಜ್ಞಾನ ಸಹಯೋಗ, ಹೂಡಿಕೆ ಪಾಲುದಾರಿಕೆ ಮತ್ತು ನಾವೀನ್ಯತೆ ಆಧಾರಿತ ಬೆಳವಣಿಗೆ ಕುರಿತಂತೆ ಚರ್ಚೆ ನಡೆಸಿದರು. ಬೆಂಗಳೂರಿನಲ್ಲಿ ಅಮೆರಿಕದ ಕಂಪನಿಗಳು ತಮ್ಮ ವಹಿವಾಟು ವಿಸ್ತರಿಸಲು ಹಾಗೂ ನವೀನತೆ ಸಾಧಿಸಲು ಅನುಕೂಲಕರ ವಾತಾವರಣ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಸಚಿವರು ಫಿನ್ಲೆಂಡ್ ಮತ್ತು ಸೈಪ್ರಸ್‌ನ ಉನ್ನತ ನಿಯೋಗಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಜೊತೆಗೆ ಕರ್ನಾಟಕ ಪೆವಿಲಿಯನ್ ಮತ್ತು ಆರ್ಟ್‌ಪಾರ್ಕ್ ಪೆವಿಲಿಯನ್‌ಗಳಿಗೆ ಭೇಟಿ ನೀಡಿ ವಿವಿಧ ನವೋದ್ಯಮಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ: ಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ
ಇದರ ಮಧ್ಯೆ ಸಿದ್ದರಾಮಯ್ಯ ಅವರು ಸಹ ಸಾಮಾಜಿಕ ಜಾಲತಾಣದ ಮೂಲಕ ಕರ್ನಾಟಕದ AI ಕ್ಷೇತ್ರದ ಸಾಧನೆಯನ್ನು ಮೆಚ್ಚಿ, ರಾಜ್ಯವು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.























