ಪೂರ್ಣ ಚಂದ್ರಗ್ರಹಣ ಎಂಬ ಭವ್ಯ ಪ್ರದರ್ಶನ

0
45

ವೇಣುಗೋಪಾಲ ಗಾಂವ್ಕರ, ಯಲ್ಲಾಪುರ
ಇಂದು ಪೂರ್ಣ ಚಂದ್ರಗ್ರಹಣ. ಸೂರ್ಯಗ್ರಹಣವು ಅಮಾವಾಸ್ಯೆಯಂದೇ ಮತ್ತು ಚಂದ್ರಗ್ರಹಣವು ಹುಣ್ಣಿಮೆಯಂದೇ ಆಗುತ್ತದೆಂಬುದು ನಮಗೆಲ್ಲ ಗೊತ್ತಿದೆ. ಆದರೆ, ಪ್ರತೀ ಅಮಾವಾಸ್ಯೆಯಂದೂ ಸೂರ್ಯಗ್ರಹಣ, ಪ್ರತೀ ಹುಣ್ಣಿಮೆಯಂದೂ ಚಂದ್ರಗ್ರಹಣ ಏಕಾಗುವುದಿಲ್ಲ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಪ್ರತೀ ವರ್ಷ ಸುಮಾರು ನಾಲ್ಕರಿಂದ ಏಳು ಬಾರಿ ನಮ್ಮ ಭೂಮಿ, ಚಂದ್ರ ಹಾಗೂ ಸೂರ್ಯ ಸರಳರೇಖೆಯಲ್ಲಿ ಬಂದು ಗ್ರಹಣವೆಂಬ ಭವ್ಯ ಪ್ರದರ್ಶನ ಏರ್ಪಡಿಸುತ್ತವೆ. ಸೂರ್ಯನ ಸುತ್ತ ನಮ್ಮ ಭೂಮಿ ಸುತ್ತುವ ಕಕ್ಷೆಗೆ ಹೋಲಿಸಿದರೆ, ಚಂದ್ರನು ಭೂಮಿಯನ್ನು ಸುತ್ತುವ ಕಕ್ಷೆ 5 ಡಿಗ್ರಿಗಳಷ್ಟು ಓರೆಯಾಗಿದೆ. ಈ ಓರೆಯ ಕಾರಣದಿಂದ, ಬಹುತೇಕ ಸಮಯದಲ್ಲಿ ಚಂದ್ರ, ಭೂಮಿ – ಸೂರ್ಯನ ಜೋಡಿಸುವ ರೇಖೆಯ ಮೇಲೆ ಅಥವಾ ಕೆಳಗೆ ಇರುತ್ತದೆ. ಈ ಸಂಗತಿಯೇ ಗ್ರಹಣವನ್ನು ವಿರಳ ವಿದ್ಯಮಾನವನ್ನಾಗಿಸಿದೆ.

ಕೆಲವರು ಒಂದು ತಿಂಗಳ ಪರ್ಯಂತ ಗೋಚರಿಸುವ ಚಂದ್ರನ ಕಲೆಗಳಿಗೆ ಚಂದ್ರಗ್ರಹಣದ ವಿದ್ಯಮಾನವನ್ನು ಸಮೀಕರಿಸುವುದುಂಟು. ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದು ಗ್ರಹಣಕ್ಕೆ ಕಾರಣವಾದರೆ, ಚಂದ್ರನ ಪ್ರಕಾಶಿತ ಭಾಗಗಳು ವಿವಿಧ ಕೋನಗಳಲ್ಲಿ ಗೋಚರಿಸುವುದು ಚಂದ್ರನ ಕಲೆಗಳಿಗೆ ಕಾರಣ. ಭೂಮಿಗೆ ಹೋಲಿಸಿದರೆ ಸೂರ್ಯನ ಗಾತ್ರ ತುಂಬ ದೊಡ್ಡದಾಗಿರುವುದರಿಂದ, ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದಾಗ, ಭೂಮಿಯ ಇನ್ನೊಂದು ಬದಿಗೆ ವೃತ್ತಾಕಾರದ ಪೂರ್ಣ ನೆರಳಿನ ಪ್ರದೇಶ ಹಾಗೂ ಅದನ್ನು ಆವರಿಸಿಕೊಂಡ ಅರೆನೆರಳಿನ ಪ್ರದೇಶ ಉಂಟಾಗುತ್ತದೆ. ಚಂದ್ರನು ಭೂಮಿಯ ಪೂರ್ಣ ನೆರಳಿನ ಪ್ರದೇಶವನ್ನು ಪ್ರವೇಶಿಸಿದಾಗ ಚಂದ್ರಗ್ರಹಣವಾಗುತ್ತದೆ. ಪ್ರತಿ ಚಂದ್ರಗ್ರಹಣವೂ ಭೂಮಿಯ ಅರ್ಧಭಾಗದಿಂದ ಗೋಚರಿಸುತ್ತದೆ. ಕೆಲವೊಮ್ಮೆ ಚಂದ್ರನು ಕೇವಲ ಭೂಮಿಯ ಅರೆನೆರಳಿನ ಪ್ರದೇಶದಲ್ಲಷ್ಟೇ ಹಾದು ಹೋಗುವುದುಂಟು. ಆಗಲೂ ಚಂದ್ರಗ್ರಹಣವಾಗುತ್ತದೆ. ಆದರೆ ಈ ಗ್ರಹಣ ತುಂಬ ಸೂಕ್ಷ÷್ಮವಾಗಿರುವುದರಿಂದ, ಸರಿಯಾಗಿ ಗಮನಿಸಿದರಷ್ಟೇ ಕಾಣಲು ಸಾಧ್ಯ.

ಗ್ರಹಣದ ಸಂದರ್ಭದಲ್ಲಿ, ಭೂಮಿಯ ವಾತಾವರಣಕ್ಕೆ ಅನುಗುಣವಾಗಿ ಚಂದ್ರನ ಬಣ್ಣವೂ ಬದಲಾಗುವುದುಂಟು. ಸೂರ್ಯನ ಬೆಳಕು ಭೂಮಿಯ ವಾತಾವರಣದಿಂದ ಹಾದುಹೋಗುವಾಗ ಹೆಚ್ಚು ತರಂಗಾಂತರಗಳನ್ನುಳ್ಳ ಅತಿನೇರಳೆ ಹಾಗೂ ಅದರ ಸಮೀಪದ ನೀಲಿಬಣ್ಣವು ಚದುರಿಹೋಗುತ್ತದೆ. ಕಡಿಮೆ ತರಂಗಾಂತರದ ಕೆಂಪುಬಣ್ಣವು ಭೂ ವಾತಾವರಣದಿಂದ ಬಾಗಿಸಲ್ಪಟ್ಟು, ಭೂಮಿಯ ನೆರಳಿನಿಂದ ಆಚ್ಛಾದಿತವಾದ ಚಂದ್ರನ ಮೇಲೆ ಬಿದ್ದು ಚಂದ್ರನು ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿ ಕಂಗೊಳಿಸುವಂತೆ ಮಾಡುತ್ತದೆ. ಭೂ ವಾತಾವರಣದಲ್ಲಿ ಮೋಡ ಹಾಗೂ ಧೂಳಿನ ಪ್ರಮಾಣ ಹೆಚ್ಚಾದಷ್ಟೂ ಚಂದ್ರನು ಅಷ್ಟೇ ಗಾಢ ವರ್ಣದಿಂದ ಹೊಳೆಯುತ್ತಾನೆ.

ಭೂಮಿಯ ಮೇಲೆ ಜ್ವಾಲಾಮುಖಿಯ ಚಟುವಟಿಕೆಗಳು ಹೆಚ್ಚಾಗಿರುವ ಸಮಯದಲ್ಲಿ ಗ್ರಹಣವಾದರೆ, ವಾತಾವರಣದಲ್ಲಿ ಜ್ವಾಲಾಮುಖಿಯ ಧೂಳು ಹಾಗೂ ಬೂದಿಯ ಪ್ರಮಾಣವು ಜಾಸ್ತಿಯಾಗಿರುವುದರಿಂದ, ಕೆಂಪು ಬೆಳಕೂ ಚದುರಿಹೋಗಿ, ಚಂದ್ರನು ಕೇವಲ ಕಪ್ಪಾಗಿ ಗೋಚರಿಸುತ್ತಾನೆ. ತಾಂತ್ರಿಕವಾಗಿ ಹೇಳುವುದಾದರೆ ಗ್ರಹಣದ ಸಂದರ್ಭದಲ್ಲಿ ಚಂದ್ರ ಕಾಣಿಸುವುದೇ ಇಲ್ಲ. 1883ರಲ್ಲಿ ಇಂಡೋನೇಷ್ಯಾದ ಕ್ರಾಕಟೋವಾ, 1963ರ ಆಗುಂಗ್ ಜ್ವಾಲಾಮುಖಿಯ ಸಂದರ್ಭದಲ್ಲಿ, 1982ರಲ್ಲಿ ಮೆಕ್ಸಿಕೋದ ಎಲ್ ಚಿಚಾನ್ ಮತ್ತು 1991ರಲ್ಲಿ ಫಿಲಿಪ್ಪೀನ್ಸ್‌ನ ಪಿನಾಟುಬೊ ಜ್ವಾಲಾಮುಖಿಯ ಸಂದರ್ಭಗಳಲ್ಲಿ ಈ ರೀತಿಯ ಅಸಹಜ ಚಂದ್ರಗ್ರಹಣಗಳಾಗಿವೆ.

ಈ ಗ್ರಹಣಗಳು ಪದೇಪದೇ ಒಂದು ಕ್ರಮಾನುಗತಿಯಲ್ಲಿ ಪುನರಾವರ್ತಿತವಾಗುವುದನ್ನು ನಮ್ಮ ಪೂರ್ವಜರು ಗಮನಿಸುತ್ತಿದ್ದಾರೆ. 2000 ವರ್ಷಕ್ಕೂ ಹಿಂದೆ ಬ್ಯಾಬಿಲೋನಿಯನ್ನರು ಈ ವಿದ್ಯಮಾನವನ್ನು ಗಮನಿಸಿದ್ದರು. ತದನಂತರ ಗ್ರೀಕರು ಕ್ರಿ.ಪೂ. 585ರ ಮೇ 28ರಂದು ಜರುಗಿದ ಸೂರ್ಯಗ್ರಹಣವನ್ನು ಈ ತಥ್ಯದ ಆಧಾರದ ಮೇಲೆ ಕರಾರುವಾಕ್ಕಾಗಿ ಊಹಿಸಿದ್ದರು. ಪ್ರತಿ 18 ವರ್ಷ, 11 ದಿನ, 8 ತಾಸುಗಳಿಗೆ ಸೂರ್ಯ, ಭೂಮಿ ಹಾಗೂ ಚಂದ್ರರು ಬಹುತೇಕ ತಮ್ಮ ಮೊದಲಿನ ಸ್ಥಾನಗಳಿಗೆ ಮರಳುತ್ತವೆ. ಈ ಆವರ್ತನೆಗೆ ಸಾರೊಸ್ ಚಕ್ರ ಎನ್ನುತ್ತಾರೆ. ಹಾಗಾಗಿ ಸೂರ್ಯ ಹಾಗೂ ಚಂದ್ರಗ್ರಹಣಗಳು ಇಷ್ಟು ಸಮಯಕ್ಕೊಮ್ಮೆ ಅದೇ ಪ್ರದೇಶದಲ್ಲಿ ಮರುಕಳಿಸುತ್ತವೆ.

2043ರ ಸೆಪ್ಟೆಂಬರ್ 18-19ರಂದು ಈ ಚಕ್ರದ ಮುಂದಿನ ಗ್ರಹಣ ಸಂಭವಿಸಲಿದೆ. ಆದರೆ ಈ ಸಂಖ್ಯೆ ಭೂಮಿಯ ದಿನಗಳ ಲೆಕ್ಕದಲ್ಲಿ ಪೂರ್ಣಾಂಕವಲ್ಲದ ಕಾರಣ ಅಂದರೆ 8 ತಾಸು ಅಧಿಕವಾಗಿರುವ ಕಾರಣ, ಭೂಮಿಯು ಸುಮಾರು 120 ಡಿಗ್ರಿ ಮುಂದೆ ಚಲಿಸಿರುತ್ತದೆ. ಹಾಗಾಗಿ ಗ್ರಹಣವಾಗುವ ಪ್ರದೇಶವು ಪಶ್ಚಿಮ ದಿಕ್ಕಿಗೆ ವರ್ಗಾವಣೆಗೊಳ್ಳುತ್ತ ಸಾಗುತ್ತದೆ. 3 ಸಾರೊಸ್ ಚಕ್ರಗಳಿಗೆ ಈ ಎಂಟು ತಾಸುಗಳು ಒಗ್ಗೂಡಿ 24 ಗಂಟೆಗಳಾಗುವುದರಿಂದ, ಈ ಸಮಯದಲ್ಲಿ (ಅಂದರೆ 54 ವರ್ಷ, 34 ದಿನಗಳಿಗೊಮ್ಮೆ) ಅಂದಾಜು ಹಳೆಯ ಸ್ಥಾನದಲ್ಲೇ ಗ್ರಹಣ ಸಂಭವಿಸುತ್ತದೆ.

ಚಂದ್ರಗ್ರಹಣದ ಸಂದರ್ಭದಲ್ಲಿ ವಿಜ್ಞಾನಿಗಳು ಅನೇಕ ವೈಜ್ಞಾನಿಕ ಸಂಶೋಧನೆಗಳನ್ನೂ ಕೈಗೊಳ್ಳುತ್ತಾರೆ. 2009ರಲ್ಲಿ ನಾಸಾ ಲೂನಾರ್ ರಿಕನಸನ್ಸ್ ಆರ್ಬಿಟರ್ ಹಾರಿಬಿಟ್ಟಿತು. ಇದು ಅಂದಿನಿಂದಲೇ ಚಂದ್ರನನ್ನು ಪರಿಭ್ರಮಿಸುತ್ತ, ವೈಜ್ಞಾನಿಕ ವಿವರಗಳನ್ನು ಕಳಿಸುತ್ತಿದೆ. ಚಂದ್ರನ ಮೂರು ಆಯಾಮಗಳ ನಕಾಶೆಯನ್ನು ತಯಾರಿಸುವುದು ಈ ಯೋಜನೆಯ ಮೂಲ ಉದ್ದೇಶ. ಅದರೊಂದಿಗೆ ಚಂದ್ರನಲ್ಲಿನ ವಿಕಿರಣಗಳನ್ನು ಹಾಗೂ ಸಂಪನ್ಮೂಲಗಳನ್ನು ಅಭ್ಯಸಿಸಿ, ಚಂದ್ರನನ್ನು ಇನ್ನೂ ಹೆಚ್ಚು ಅನ್ವೇಷಿಸಲು ಮಾನವಸಹಿತ ಯಾನಗಳನ್ನು ಕೈಗೊಳ್ಳಲು ಪೂರ್ವಭಾವಿಯಾಗಿ ಭೂಮಿಕೆ ಸಿದ್ಧಪಡಿಸುವುದು ಇದರ ಉದ್ದೇಶ.

ಈ ನೌಕೆಯು ತನಗೆ ವಹಿಸಿದ ಕೆಲಸಗಳನ್ನು ಪೂರ್ಣಗೊಳಿಸಿ ಇನ್ನೂ ಹೆಚ್ಚಿನ ಕೆಲಸಗಳನ್ನು ನಿರ್ವಹಿಸುತ್ತಿದೆ. ಚಂದ್ರಗ್ರಹಣದ ಸಂದರ್ಭದಲ್ಲಿ ಇದು ಒಂದು ವಿಶಿಷ್ಟ ಕೆಲಸ ಮಾಡುತ್ತದೆ. ಎಲ್ಲ ಬಾಹ್ಯಾಕಾಶ ನೌಕೆಗಳೂ ಗ್ರಹಣದ ಸಮಯದಲ್ಲಾಗುವ ಉಷ್ಣಾಂಶದ ಹಠಾತ್ ಏರಿಳಿತಗಳನ್ನು ಸಹಿಸಿಕೊಳ್ಳುವಷ್ಟು ಕ್ಷಮತೆಯನ್ನು ಹೊಂದಿರುವುದಿಲ್ಲ. ಆದರೆ ಲೂನಾರ್ ಆರ್ಬಿಟರ್ ಈ ಏರಿಳಿತಗಳನ್ನು ತಾಳಿಕೊಂಡು ಈ ವಿಶಿಷ್ಟ ಸಮಯದಲ್ಲಿ ಚಂದ್ರನನ್ನು ಅಧ್ಯಯನ ಮಾಡಬಲ್ಲದು. ಗ್ರಹಣದ ಸಮಯದಲ್ಲಿ ಲೂನಾರ್ ರಿಕನಸನ್ಸ್ ಆರ್ಬಿಟರ್‌ನ ವಿವಿಧ ಅಂಗಗಳನ್ನು ನಿಷ್ಕ್ರಿಯಗೊಳಿಸಿ, ಕೇವಲ ಡಿವೈನರ್ ಎಂಬ ವಿಭಾಗವನ್ನು ಸಕ್ರಿಯವಾಗಿಡಲಾಗುತ್ತದೆ. ಗ್ರಹಣದ ಸಮಯದಲ್ಲಿ ಉಷ್ಣಾಂಶದಲ್ಲಿ ಆಗುವ ಹಠಾತ್ ಬದಲಾವಣೆಗೆ ಚಂದ್ರನ ಮೇಲ್ಮೈ ಹೇಗೆ ಸ್ಪಂದಿಸುತ್ತದೆಯೆಂದು ಗಮನಿಸುವುದು ಇದರ ಕೆಲಸ. ಬೇರೆಬೇರೆ ಗಾತ್ರದ ಕಲ್ಲುಗಳು ಉಷ್ಣತೆಯನ್ನು ಕಳೆದುಕೊಳ್ಳುವುದು ಅಂದರೆ ತಂಪಾಗುವ ವೇಗ ಬೇರೆಬೇರೆ ಆಗಿರುತ್ತದೆ. ಆಯಾಯ ಕಲ್ಲುಗಳಲ್ಲಿರುವ ಧಾತುಗಳೂ ಈ ವಿದ್ಯಮಾನಕ್ಕೆ ತಮ್ಮದೇ ಕೊಡುಗೆ ನೀಡುತ್ತವೆ. ಹಾಗಾಗಿ ವಿಜ್ಞಾನಿಗಳಿಗೆ ಈ ಶಿಲೆಗಳ ಗಾತ್ರ ಹಾಗೂ ಸಾಂದ್ರತೆಯನ್ನು ನಿರ್ಣಯಿಸಲು, ಅವುಗಳಲ್ಲಿರುವ ರಾಸಾಯನಿಕ ಸಂಯೋಜನೆ ಹಾಗೂ ಅವುಗಳ ಗುಣಲಕ್ಷಣಗಳನ್ನು ಅರಿಯಲು ಡಿವೈನರ್ ಕಳಿಸುವ ದತ್ತಾಂಶಗಳು ಸಹಾಯಕವಾಗಿವೆ.

ಗ್ರಹಣದ ಸಂದರ್ಭದಲ್ಲಿ ಚಂದ್ರನ ಮೇಲಿನ ಪ್ರತೀ ಕುಳಿಗಳು ನೆರಳಿನಿಂದ ಆಚ್ಛಾದಿತವಾಗುವ ಸಮಯವು ವಿಭಿನ್ನವಾಗಿರುತ್ತದೆ. ಯಾವುದೇ ಕುಳಿಯ ಮೇಲೆ ನೆರಳು ಬೀಳಲು ಶುರುವಾಗಿ ಅದು ನೆರಳಿನಿಂದ ಆವೃತವಾಗಿ, ನೆರಳು ಅಲ್ಲಿಂದ ಸಂಪೂರ್ಣವಾಗಿ ಸರಿದುಹೋಗಲು ತಗುಲುವ ಸಮಯವನ್ನು ಗಮನಿಸಿ, ವಿಜ್ಞಾನಿಗಳು ಭೂಮಿಯ ಪೂರ್ಣ ನೆರಳಿನ ಪ್ರದೇಶವನ್ನು ಲೆಕ್ಕ ಹಾಕುತ್ತಾರೆ. ವಿದ್ಯಾರ್ಥಿಗಳು ಹಾಗೂ ಕುತೂಹಲಿಗಳು ಗ್ರಹಣದ ಸಮಯದಲ್ಲಿ ಈ ಚಟುವಟಿಕೆಯನ್ನು ಮಾಡಲು ಪ್ರಯತ್ನಿಸಬಹುದು. ಚಂದ್ರಗ್ರಹಣವು ಬರಿಗಣ್ಣಿಗೆ ಕಾಣಿಸುವ ಪ್ರಾಕೃತಿಕ ಹಾಗೂ ಅದ್ಭುತ ವಿದ್ಯಮಾನ. ಪ್ರತಿಯೊಬ್ಬರೂ ಇದನ್ನು ಬರಿಗಣ್ಣಿನಲ್ಲಿಯೇ ನೋಡಿ ಸಂತೋಷಪಡಬಹುದು.

ಸಮಯ ಘಟನಾವಳಿ
20:59 ಭೂಮಿಯ ಅರೆ-ನೆರಳಿನ ಪ್ರದೇಶದೊಳಗೆ ಚಂದ್ರನ ಪ್ರವೇಶ.
21:57 ದಿಗಂತದಿಂದ 50 ಡಿಗ್ರಿ ಎತ್ತರದಲ್ಲಿ ಭೂಮಿಯ ಪೂರ್ಣ ನೆರಳಿನ ಪ್ರದೇಶದೊಳಗೆ ಚಂದ್ರನ ಪ್ರವೇಶ. ಪಾರ್ಶ್ವ ಗ್ರಹಣ ಪ್ರಾರಂಭ.
23:01 ದಿಗಂತದಿಂದ 63 ಡಿಗ್ರಿ ಎತ್ತರದಲ್ಲಿ ಭೂಮಿಯ ಪೂರ್ಣ ನೆರಳಿನ ಪ್ರದೇಶದೊಳಗೆ ಪೂರ್ಣ ಚಂದ್ರನ ಪ್ರವೇಶ. ಪೂರ್ಣ ಚಂದ್ರಗ್ರಹಣ ಪ್ರಾರಂಭ.
23:42 ಗ್ರಹಣದ ಮಧ್ಯಬಿಂದು (ದಿಗಂತದಿಂದ 69 ಡಿಗ್ರಿ ಎತ್ತರದಲ್ಲಿ)
00:23 ದಿಗಂತದಿಂದ 71 ಡಿಗ್ರಿ ಎತ್ತರದಲ್ಲಿ ಭೂಮಿಯ ಪೂರ್ಣ ನೆರಳಿನ ಪ್ರದೇಶದಿಂದ ಪೂರ್ಣಚಂದ್ರನ ನಿರ್ಗಮನ ಪ್ರಾರಂಭ. ಪೂರ್ಣ ಚಂದ್ರಗ್ರಹಣ ಮುಕ್ತಾಯ.
01:26 ದಿಗಂತದಿಂದ 64 ಡಿಗ್ರಿ ಎತ್ತರದಲ್ಲಿ ಭೂಮಿಯ ಪೂರ್ಣ ನೆರಳಿನ ಪ್ರದೇಶದಿಂದ ಚಂದ್ರನ ಸಂಪೂರ್ಣ ನಿರ್ಗಮನ.
02:25 ಭೂಮಿಯ ಅರೆನೆರಳಿನ ಪ್ರದೇಶದಿಂದ ಚಂದ್ರನ ನಿರ್ಗಮನ.

Previous articleಬಾಗಲಕೋಟೆ: ಕುಡಿದ ಮತ್ತಿನಲ್ಲಿ ಪತ್ನಿಯ ತಲೆಬೋಳಿಸಿದ ಪತಿ..!
Next articleಉಪರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಸಂಸದರಿಗೆ ಕಾರ್ಯಾಗಾರ, ಸುದರ್ಶನ್‌ಗೆ ಓವೈಸಿ ಬೆಂಬಲ

LEAVE A REPLY

Please enter your comment!
Please enter your name here