ಬಾಗಲಕೋಟೆ: ರಾಜ್ಯದಲ್ಲಿ ನಡೆಯುವ ಎಲ್ಲ ಬೆಳವಣಿಗೆಗಳೂ ರಾಹುಲ್ ಗಾಂಧಿ ಅವರಿಗೆ ಗಮನಕ್ಕಿರುವುದಿಲ್ಲ, ಅಲ್ಲಿಯವರೆಗೆ ತಲುಪಿಸುವ ಕೆಲಸವಾಗಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ವಿಷಯಗಳನ್ನು ಹೈಕಮಾಂಡ್ ಕೂಡ ಸೂಕ್ಷ್ಮವಾಗಿ ಗಮನಿಸಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ ಅವರ ಇತ್ತೀಚಿನ ನಡೆ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿರುವುದು ಸೇರಿದಂತೆ ಡಿ.ಕೆ. ಶಿವಕುಮಾರ ಅವರ ಇತ್ತೀಚಿನ ನಡುವಳಿಕೆಗೆ ಸಂಬಂಧಿಸಿದಂತೆ ರಾಜಣ್ಣ ಅವರು ಎತ್ತಿರುವ ಪ್ರಶ್ನೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಎಲ್ಲ ವಿಚಾರವೂ ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದಿರುವುದಿಲ್ಲ, ಅವರ ಗಮನಕ್ಕೆ ತರುವ ಕೆಲಸವಾಗಬೇಕಿದೆ. ಹೈಕಮಾಂಡ್ ಕೂಡ ಇಂಥ ವಿಷಯಗಳನ್ನು ಗಮನಿಸಬೇಕಿದೆ ಎಂದು ಹೇಳಿದರು.
ರಾಜಣ್ಣ ಸಚಿವ ಸ್ಥಾನ ಕೈತಪ್ಪಿದ್ದರ ವಿಚಾರವಾಗಿ ಕೇಳಿದ ಪ್ರಶ್ನೆಗೆ ರಾಜಣ್ಣ ಅವರು ಸಹ ಹೈಕಮಾಂಡ್ ಬಳಿ ತೆರಳಿ ತಮಗೆ ಆಗಿರುವ ಅನ್ಯಾಯವನ್ನು ವಿವರಿಸಬೇಕು. ರಾಜಣ್ಣ ಹೇಳಿಕೆಯನ್ನು ತಿರುಚಿ ಹೈಕಮಾಂಡ್ ಮುಂದೆ ವಿವರಿಸಲಾಗಿದೆ. ಅದನ್ನು ಸರಿಪಡಿಸುವ ಕೆಲಸವಾಗಬೇಕೆಂದರು.
ಧರ್ಮಸ್ಥಳ ಕೇಸ್: ಎನ್‌ಐಎಗೆ ವಹಿಸಿದರೆ ತಪ್ಪಿಲ್ಲ..!: ಧರ್ಮಸ್ಥಳ ಬುರಡೆ ಪ್ರಕರಣವನ್ನು ಎನ್‌ಐಎಗೆ ವಹಿಸಿದರೆ ತಪ್ಪಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಎಸ್‌ಐಟಿಯಿಂದ ಈಗ ತನಿಖೆ ನಡೆದಿದ್ದು, ಅಂತಿಮ ವರದಿ ಕೊಟ್ಟಿಲ್ಲ. ಅಂತಿಮ ವರದಿ ನೋಡಬೇಕು, ಎನ್‌ಐಎ ಅವರು ಈ ಪ್ರಕರಣದ ಬಗ್ಗೆ ತನಿಖೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.