Home Advertisement
Home ಸುದ್ದಿ ರಾಜ್ಯ ಹಿರಿಯರ ಬದುಕಿಗೆ ‘ಸ್ಪಂದನ’: ಅರಿವು ಕೇಂದ್ರದಿಂದ ಜೀವನೋತ್ಸಾಹ

ಹಿರಿಯರ ಬದುಕಿಗೆ ‘ಸ್ಪಂದನ’: ಅರಿವು ಕೇಂದ್ರದಿಂದ ಜೀವನೋತ್ಸಾಹ

0
2

“ವೃದ್ಧರಿಗೆ ಮಕ್ಕಳಂತೆಯೇ ಕಾಳಜಿ ಬೇಕು; ಅರಿವು ಕೇಂದ್ರಗಳಿಂದ ಮಾನಸಿಕ ಆರೋಗ್ಯ ಬಲಪಡಿಸುವ ಪ್ರಯತ್ನ” – ಪ್ರಿಯಾಂಕ್ ಖರ್ಗೆ

ಬೆಂಗಳೂರು: ವಯಸ್ಸು ಹೆಚ್ಚಾದಂತೆ ವೃದ್ಧರು ಮಕ್ಕಳಂತಾಗುತ್ತಾರೆ ಎಂಬ ಮಾತಿದೆ. ಆದ್ದರಿಂದ ಹಿರಿಯ ನಾಗರಿಕರಿಗೆ ಮಕ್ಕಳಿಗೆ ನೀಡುವಷ್ಟೇ ಪ್ರೀತಿ, ಕಾಳಜಿ ಮತ್ತು ಗಮನ ನೀಡಬೇಕು. ಅದರಿಂದ ಮಾತ್ರ ಅವರಲ್ಲಿ ಮಾನಸಿಕ ಆರೋಗ್ಯ, ಆತ್ಮಸ್ಥೈರ್ಯ ಹಾಗೂ ಸಂತೃಪ್ತ ಬದುಕು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅರಿವು ಕೇಂದ್ರಗಳ ಚಟುವಟಿಕೆಗಳ ಚಿತ್ರಗಳನ್ನು ಹಂಚಿಕೊಂಡು ಪ್ರತಿಕ್ರಿಯಿಸಿದ ಅವರು, ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಹಿರಿಯ ನಾಗರಿಕರಲ್ಲಿ ಜೀವನೋತ್ಸಾಹ ತುಂಬುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ರೂಪಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ

ಅರಿವು ಕೇಂದ್ರಗಳು ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದ ಜನರಿಗೆ ಅಪ್ಯಾಯಮಾನ ಕೇಂದ್ರಗಳಾಗಿವೆ. ಕಲಿಕೆ–ಟಾಟಾ ಟ್ರಸ್ಟ್ ಸಹಯೋಗದಲ್ಲಿ ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶಗಳ ಹಿರಿಯ ನಾಗರಿಕರ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಲ್ಲಿ ಹಿರಿಯರಿಗೆ ಜ್ಞಾನಾರ್ಜನೆ ಮತ್ತು ನಿರಂತರ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ 60 ಅರಿವು ಕೇಂದ್ರಗಳಲ್ಲಿ ‘ಸ್ಪಂದನ – ಗ್ರಾಮ ಹಿರಿಯರ ಕೇಂದ್ರ’ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಗ್ರಾಮಗಳ ಹಿರಿಯ ನಾಗರಿಕರು ತಮ್ಮ ಬಿಡುವಿನ ವೇಳೆಯಲ್ಲಿ ಅರಿವು ಕೇಂದ್ರಗಳಿಗೆ ಆಗಮಿಸಿ ಸೃಜನಾತ್ಮಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  ʼಜನ ನಾಯಗನ್ʼ ಚಿತ್ರಕ್ಕೆ ಹಿನ್ನಡೆ : ಸದ್ಯಕ್ಕಿಲ್ಲ ಬಿಡುಗಡೆಯ ಗ್ಯಾರೆಂಟಿ

ಹಿರಿಯರು ಚಿತ್ರಗಳಿಗೆ ಬಣ್ಣ ತುಂಬುವುದು, ಕಾಗದದಿಂದ ಕಲಾಕೃತಿಗಳನ್ನು ತಯಾರಿಸುವುದು, ಓದು–ಬರಹ ಅಭ್ಯಾಸ, ಭಜನೆ ಹಾಗೂ ವಿವಿಧ ಸಮೂಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇದರ ಮೂಲಕ ಅವರು ಮಾನಸಿಕ ಸಂತೃಪ್ತಿ, ಸಾಮಾಜಿಕ ಸಂಪರ್ಕ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ.

‘ಸ್ಪಂದನ’ ಕಾರ್ಯಕ್ರಮವು ಹಿರಿಯ ನಾಗರಿಕರಲ್ಲಿ ಆರೋಗ್ಯಕರ ಜೀವನಶೈಲಿ, ಸಕಾರಾತ್ಮಕ ಮನೋಭಾವ ಮತ್ತು ಸಾಮಾಜಿಕ ಒಡನಾಟವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

Previous articleʼಜನ ನಾಯಗನ್ʼ ಚಿತ್ರಕ್ಕೆ ಹಿನ್ನಡೆ : ಸದ್ಯಕ್ಕಿಲ್ಲ ಬಿಡುಗಡೆಯ ಗ್ಯಾರೆಂಟಿ