ಬೆಂಗಳೂರು: “ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕ್ ಅನ್ನು ಸ್ಥಾಪಿಸಲಾಗಿದ್ದು, ಅದರ 2ನೇ ಹಂತದ ಅಭಿವೃದ್ಧಿಗಾಗಿ 48 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲೂ ತೀರ್ಮಾನಿಸಲಾಗಿದೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಹೇಳಿದ್ದಾರೆ.
ದೇಶದ ಮೊದಲ ದೇಶೀ ನಿರ್ಮಿತ 8-ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್‌ಗೆ ಮುಂಬರುವ ನವೆಂಬರ್‌ನಲ್ಲಿ ಅಮರಾವತಿಯಲ್ಲಿ ಚಾಲನೆ ಸಿಗಲಿದೆ ಎಂಬ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆಗೆ ಸಚಿವರು ತಿರುಗೇಟು ನೀಡಿದ್ದಾರೆ.
ಕ್ವಾಂಟಮ್ ಕಂಪ್ಯೂಟರ್ ವಿಚಾರ, ಬೆಂಗಳೂರು ನಗರದಲ್ಲಿ ನಡೆಯುವ ಕ್ವಾಂಟಮ್ ಸಮ್ಮೇಳನ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಜಟಾಪಟಿಗೆ ಕಾರಣವಾಗಿದೆ. ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ದೇಶದ ಕ್ವಾಂಟಮ್ ಕ್ಷೇತ್ರದ ಕೇಂದ್ರ ಬಿಂದುವಾಗಿದ್ದು, ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಮ್ಮೇಳನದ ಉದ್ದೇಶ: ಜು.31 ಹಾಗೂ ಆ.1ರಂದು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಸಮ್ಮೇಳನದ ಮೂಲಕ ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳು, ಉದ್ಯಮ, ಮತ್ತು ಗ್ಲೋಬಲ್ ತಂತ್ರಜ್ಞಾನ ಕಂಪನಿಗಳೊಂದಿಗೆ ಸಹಭಾಗಿತ್ವ ಬೆಳೆಸುವುದು ಉದ್ದೇಶವಾಗಿದ್ದು, ಈ ಸಮ್ಮೇಳನದಿಂದಾಗಿ ರಾಜ್ಯವನ್ನು ಕ್ವಾಂಟಮ್ ಕ್ಷೇತ್ರದ ಜಾಗತಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗುತ್ತದೆ.
ಈ ಸಮ್ಮೇಳನದಲ್ಲಿ ಕ್ವಾಂಟಮ್ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರು, ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಸಮ್ಮೇಳನದಲ್ಲಿ ರಾಜ್ಯವನ್ನು ಕ್ವಾಂಟಮ್ ಕ್ಷೇತ್ರದ ಜಾಗತಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತೀಯ ಕ್ವಾಂಟಮ್ ಸಂಶೋಧನೆಯಲ್ಲಿನ ಮಹತ್ವದ ಹೆಜ್ಜೆಯಾಗಿದ್ದು, ಆರೋಗ್ಯ, ಹಣಕಾಸು, ರಾಷ್ಟ್ರದ ಭದ್ರತೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಅಪಾರವಾಗಿ ಬಳಸಬಹುದಾದ ತಂತ್ರಜ್ಞಾನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ರಾಷ್ಟ್ರದ ಕೇಂದ್ರ ಬಿಂದುವಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ.
ಕ್ವಾಂಟಮ್ ತಂತ್ರಜ್ಞಾನವು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಯತ್ತ ನಡೆಸುತ್ತಿದೆ. ಕ್ವಾಂಟಮ್ ಕಂಪ್ಯೂಟರ್ ಮಾತ್ರವಲ್ಲದೆ, ಕ್ವಾಂಟಮ್ ಸುರಕ್ಷಿತ ಸೈಬರ್ ತಂತ್ರಜ್ಞಾನ, ಕ್ವಾಂಟಮ್ ಇಮೇಜಿಂಗ್, ಹಾಗೂ ಕ್ವಾಂಟಮ್ ನೆಟ್‌ವರ್ಕಿಂಗ್ ಎಲ್ಲವೂ ಭವಿಷ್ಯದ ತಂತ್ರಜ್ಞಾನದ ಮೂಲಭೂತ ಅಂಶಗಳಾಗಿವೆ, ಕರ್ನಾಟಕವನ್ನು ಕ್ವಾಂಟಮ್ ಕ್ಷೇತ್ರದ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಜು.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪ್ರಗತಿಯನ್ನು ಸಂಭ್ರಮಿಸುವಾಗ ನಾವು ಸತ್ಯ ಹಾಗೂ ಅಂಕಿಗಳಲ್ಲಿ ಪರಿಗಣಿಸುವ ಪರಿಪಾಠ ಬೆಳೆಸಿಕೊಳ್ಳುವ ಎಂದು ಸಚಿವರು ಸಲಹೆಯನ್ನು ನೀಡಿದ್ದಾರೆ.
Dhanyawaad