ಐಟಿ ಉದ್ಯಮಕ್ಕೆ ಗುಡ್ ನ್ಯೂಸ್: 12 ಗಂಟೆ ಕೆಲಸ ವಿಚಾರದ ಅಪ್‌ಡೇಟ್

0
70

ಬೆಂಗಳೂರು: ಐಟಿ/ ಐಟಿಇಎಸ್ ಉದ್ಯಮದಲ್ಲಿ ಉದ್ಯೋಗಿಗಳ ಕೆಲಸದ ಸಮಯ ದಿನಕ್ಕೆ 12 ಗಂಟೆಗಳಿಗೆ ವಿಸ್ತರಿಸುವ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಂಡಿದೆ. ಈ ಮೂಲಕ ಐಟಿ ವಲಯದ ಉದ್ಯೋಗಿಗಳ ಹೋರಾಟಕ್ಕೆ ಜಯ ದೊರೆತಂತಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಲಸದ ಸಮಯವನ್ನು ವಿಸ್ತರಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘ ತಿಳಿಸಿದೆ.

ಕೆಐಟಿಯು ಬೆಂಗಳೂರಿನಾದ್ಯಂತ ಐಟಿ ಪಾರ್ಕ್‌ಗಳು, ಕಂಪನಿ, ಕಚೇರಿಗಳ ಹೊರಗೆ, ಸಾರ್ವಜನಿಕ ರಸ್ತೆಗಳಲ್ಲಿ ನಿರಂತರ ಆರು ವಾರಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿತ್ತು. ಸರ್ಕಾರದ ಪ್ರಸ್ತಾವನೆ ಕೈಬಿಡಬೇಕೆಂದು ಆಗ್ರಹಿಸಿತ್ತು. ಅಂತಿಮವಾಗಿ ಒಕ್ಕೂಟದ ಪದಾಧಿಕಾರಿಗಳೊಂದಿಗಿನ ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಮಿಕ ಆಯುಕ್ತ ಜಿ ಮಂಜುನಾಥ್ ಸಬೆ ನಡೆಸಿ ಸಭೆಯಲ್ಲಿಯೇ ಪ್ರಸ್ತಾವನೆ ಕೈಬಿಡುವುದಾಗಿ ಖಚಿತಪಡಿಸಿದ್ದಾರೆ ಎಂದು ಕೆಐಟಿಯು ತಿಳಿಸಿದೆ.

1961 ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅನ್ವಯ ಪ್ರಸ್ತಾವಿತ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಯಲ್ಲಿ ಕೆಲಸದ ಸಮಯ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಇತ್ತು.

ಒಂದು ವೇಳೆ ಇದು ಅನುಷ್ಠಾನಗೊಂಡಿದ್ದರೆ, ಕೆಲಸದ ಸಮಯ ವಿಸ್ತರಣೆಯಾಗುತ್ತಿತ್ತು. ಇದು ಕಾರ್ಮಿಕರ ವೈಯಕ್ತಿಕ ಸಮಯದ ಹಕ್ಕಿನ ಉಲ್ಲಂಘನೆ. ಇದನ್ನು ಯಾವುದೇ ಸಂದರ್ಭದಲ್ಲೂ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೆಐಟಿಯು ಎಚ್ಚರಿಸಿತ್ತು.

ಕಾನೂನುಬದ್ಧ ಕೆಲಸದ ಅವಧಿಯನ್ನು ದಿನಕ್ಕೆ 10 ಗಂಟೆಯಿಂದ 12 ಗಂಟೆಗೆ ವಿಸ್ತರಿಸಲಾಗುತ್ತಿದೆ. ಈ ಬದಲಾವಣೆಯಿಂದಾಗಿ ಉದ್ಯೋಗಿಗಳಿಗೆ ಕುತ್ತು ಬರಲಿದೆ. 3 ಪಾಳಿ ವ್ಯವಸ್ಥೆಯಿಂದ 2 ಪಾಳಿ ವ್ಯವಸ್ಥೆಗೆ ದಾರಿ ಮಾಡಿದಂತೆ. ಹೀಗಾಗಿ ಮೂರನೇ ಒಂದು ಭಾಗದಷ್ಟು ಉದ್ಯೋಗ ಕಡಿತಗೊಳ್ಳಬೇಕಾಗುತ್ತದೆ ಎಂದು ಕೆಐಟಿಯು ಹೇಳಿತ್ತು.

ಕರ್ನಾಟಕದ ಐಟಿ ವಲಯದ ಉದ್ಯೋಗಿಗಳನ್ನು ಪ್ರತಿನಿಧಿಸುವ ನೋಂದಾಯಿತ ಒಕ್ಕೂಟವಾದ ಕೆಐಟಿಯು, “ಇದೊಂದು ಐತಿಹಾಸಿಕ ಕ್ಷಣ. ಕಾರ್ಮಿಕರೆಲ್ಲ ಒಂದಾದಾಗ, ಕಾರ್ಮಿಕ ರಕ್ಷಣೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಪ್ರಬಲ ಅಸ್ತ್ರಗಳನ್ನು ಸಹ ಸೋಲಿಸಬಹುದು ಎನ್ನುವುದು ಇದು ಸಾಬೀತುಪಡಿಸುತ್ತದೆ” ಎಂದು ಹೇಳಿದೆ.

ಕೆಐಟಿಯು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಅವರು, “ಇದು ಕಾರ್ಮಿಕರ ವೈಯಕ್ತಿಕ ಜೀವನದ ಮೂಲಭೂತ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ. ನಮ್ಮ ನಿರಂತರ ಹೋರಾಟ ಕರ್ನಾಟಕ ಸರ್ಕಾರದ ಕೆಲಸದ ಸಮಯವನ್ನು ವಿಸ್ತರಿಸುವ ಪ್ರಯತ್ನದಿಂದ ಹಿಂದೆ ಸರಿಯುವಂತೆ ಮಾಡಿದೆ” ಎಂದು ಹೇಳಿದ್ದಾರೆ.

ಸಚಿವ ಸಂತೋಷ್ ಲಾಡ್ ಸ್ಪಷ್ಟನೆ: ಐಟಿ/ ಐಟಿಇಎಸ್ ವಲಯದಲ್ಲಿ ದೈನಂದಿನ ಕೆಲಸದ ಸಮಯ ಹೆಚ್ಚಿಸುವ ಪ್ರಸ್ತಾವಿತ ಕ್ರಮವನ್ನು ಕೈಬಿಟ್ಟು, ಕೆಲಸದ ಸಮಯವನ್ನು ಹೆಚ್ಚಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಚೇರಿಯೂ ದೃಢಪಡಿಸಿದೆ.

ಕೆಲಸದ ಅವಧಿ ವಿಸ್ತರಣೆ ಮಾಡಬಾರದು ಎಂದು ಹಲವಾರು ಐಟಿ ಉದ್ಯೋಗಿಗಳು ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು. ಟೆಕ್ಕಿಗಳು ಈಗಿರುವ ಕೆಲಸದ ಅವಧಿಗಿಂತ ಹೆಚ್ಚಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

Previous articleIndia-England 5th Test:‌‌ ಸಿರಾಜ್, ಪ್ರಸಿದ್ಧ್ ಅಬ್ಬರ, 247ಕ್ಕೆ ಇಂಗ್ಲೆಂಡ್‌ ಆಲೌಟ್
Next articleಸಂಪಾದಕೀಯ: ಮಾಲೇಗಾಂವ್ ಸ್ಫೋಟ ನಿಜ ದ್ರೋಹಿ ಯಾರು?

LEAVE A REPLY

Please enter your comment!
Please enter your name here