ಮಡುರೋ: ಆಗ ಡ್ರೈವರ್‌, ಬಳಿಕ ವೆನೆಜುವೆಲಾ ಸಾರಥಿ, ಈಗ ಪಾಪರ್

0
1
ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಮುಖ್ಯ ಉಪಸಂಪಾದಕ ಶಶಿಧರ್ ಎನ್ ಬರೆದಿರುವ ಲೇಖನ ಮಡುರೋ: ಆಗ ಡ್ರೈವರ್‌, ಬಳಿಕ ವೆನೆಜುವೆಲಾ ಸಾರಥಿ, ಈಗ ಪಾಪರ್

ಶಶಿಧರ್ ಎನ್. ಮುಖ್ಯ ಉಪಸಂಪಾದಕ

ವೆನೆಜುವೆಲಾ. ದಕ್ಷಿಣ ಅಮೆರಿಕದ ಈ ದೇಶ, ಜಗತ್ತಿನಲ್ಲೇ ಅತಿ ಹೆಚ್ಚು ತೈಲ ಸಂಪತ್ತು ಹೊಂದಿದೆ. ಆ ದೇಶದಲ್ಲಿ 303 ಶತಕೋಟಿ ಡಾಲರ್ ತೈಲಸಂಪತ್ತು ಇದೆ ಎನ್ನುವುದು ಅಂದಾಜು. ಜಗತ್ತಿನ ಶೇ. 17ರಷ್ಟು ತೈಲ ಈ ದೇಶವೊಂದರಲ್ಲೇ ಇದೆ. ಸೌದಿ ಅರೇಬಿಯಾಗಿಂತಲೂ ಜಾಸ್ತಿ ಪೆಟ್ರೋಲು ಜಗತ್ತಿಗೆ ಪೂರೈಕೆಯಾಗುತ್ತಿರುವುದು ಇಲ್ಲಿಂದಲೇ.

ಇಂಥ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಮೊರೊಸ್. ಅಮೆರಿಕ ಅಧ್ಯಕ್ಷ ಟ್ರಂಪ್ ಆದೇಶದಂತೆ ವೆನೆಜುವೆಲಾದ ಕಾರಾಕಾಸ್‌ಗೆ ಫೆಡರಲ್ ಸೇನೆ ನುಗ್ಗಿ ನಿಕೋಲಸ್ ಮತ್ತು ಅವರ ಪತ್ನಿ ಸಿಲಿಯ ಫ್ಲೊರ‍್ಸ್ ಅವರನ್ನು ಬಂಧಿಸಿ, ನ್ಯೂಯಾರ್ಕ್ಗೆ ಹೊತ್ತುಕೊಂಡು ಹೋಗಿದೆ. ಅಮೆರಿಕಕ್ಕೆ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ತಂಡದ ಕಿಂಗ್ ಪಿನ್ ಮಡುರೋ ಎಂದು ನೇರವಾಗಿ ಟ್ರಂಪ್ ಆರೋಪಿಸಿದ್ದಾರೆ.

ಕೆಲವು ವಾರಗಳಿಂದ ಅಮೆರಿಕಾಗೆ ವೆನೆಜುವಲಾದಿಂದಲೇ ಮಾದಕವಸ್ತುಗಳ ಪೂರೈಕೆಯಾಗುತ್ತಿದೆ ಎಂದು ಟ್ರಂಪ್ ಗಂಭೀರ ಆರೋಪ ಮಾಡುತ್ತಲೇ ಬಂದಿದ್ದರು. ಡ್ರಗ್ಸ್ ಸಾಗಿಸುತ್ತಿದ್ದ ದೋಣಿಗಳ ಮೇಲೆ ದಾಳಿಯೂ ನಡೆದಿತ್ತು. ಈಗ ಮಡುರೋ ಬಂಧನವೂ ಆಗಿ ವಿಚಾರಣೆಯೂ ಆರಂಭವಾಗಿದೆ. ಆದರೆ ಟ್ರಂಪ್ ನಿಜವಾದ ಉದ್ದೇಶ ಬೇರೆಯೇ ಆಗಿದೆ ಎನ್ನುವುದು ಕೆಲವರ ಆರೋಪ.

ವೆನೆಜುವೆಲಾದ ತೈಲಸಂಪತ್ತಿನ ಮೇಲೆ ಟ್ರಂಪ್ ಕಣ್ಣು. ಅದಕ್ಕೆ ತಕ್ಕ ಹಾಗೆ, ಮಡುರೋ ಬಂಧನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ನಾವೇ ಈಗ ದೇಶವನ್ನು ನಡೆಸುತ್ತೇವೆ. ತೈಲ ಮೂಲಸೌಕರ್ಯವನ್ನೂ ಹೆಚ್ಚಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈ ಆರೋಪಗಳಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಲಾಗದು.

ಕೆರಿಬಿಯನ್ ದೇಶಗಳು, ಮೆಕ್ಸಿಕೋಗಳಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ದೊಡ್ಡ ದಂಧೆ. ಅವರೆಲ್ಲರ ಪ್ರಮುಖ ಟಾರ್ಗೆಟ್ ಅಮೆರಿಕದ ಜನರೇ ಅನ್ನೋದು ಕೂಡ ಸತ್ಯ. ಆದರೆ ಅದರಲ್ಲಿ ಮಡುರೋ ಪಾತ್ರ ಎಷ್ಟಿತ್ತು. ಅವರೇ ಡ್ರಗ್ ಟ್ರಾಫಿಕಿಂಗ್ ಜಾಲದ ಕಿಂಗ್‌ಪಿನ್ ಎನ್ನುವ ಆರೋಪ ಎಷ್ಟು ಸರಿ ಎನ್ನುವುದು ಚರ್ಚೆಗೆ ಕಾರಣವಾಗಿದೆ.

2013ರಿಂದಲೂ ನಿಕೋಲಸ್ ವೆನೆಜುವೆಲಾದ ಅಧ್ಯಕ್ಷ. ಅದಕ್ಕೂ ಮೊದಲು ಉಪಾಧ್ಯಕ್ಷರಾಗಿ, ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಮಿಕನ ಮಗನಾಗಿ ಹುಟ್ಟಿದ್ದ ನಿಕೋಲಸ್, ದೇಶವೊಂದರ ಚುಕ್ಕಾಣಿ ಹಿಡಿಯುವಷ್ಟು ಬೆಳೆದಿದ್ದು ರೋಚಕವೇ. ನಿಕೋಲಸ್ ಶಾಲೆಯಲ್ಲಿಯೇ ವಿದ್ಯಾರ್ಥಿ ನಾಯಕ. ಆದರೆ ಪದವಿ ಮುಗಿಸಲಿಲ್ಲ. ಶಾಲೆ ಬಿಟ್ಟ ಮೇಲೆ ಹೊಟ್ಟೆಪಾಡಿಗೆ ಹಿಡಿದಿದ್ದು ಬಸ್ ಡ್ರೈವರ್‌ ಕೆಲಸ.

ಆ ಸಮಯದಲ್ಲಿಯೇ ಟ್ರೇಡ್ ಯೂನಿಯನ್ ನಾಯಕನಾಗಿ ಆ ಮೂಲಕ ರಾಷ್ಟ್ರ ರಾಜಕೀಯಕ್ಕೆ ಕಾಲಿಟ್ಟ ನಿಕೋಲಸ್, 2000ನೇ ಇಸವಿಯಲ್ಲಿ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆ ಆಗಿದ್ದು ರಾಜಕಾರಣದ ಮೊದಲ ಹೆಜ್ಜೆಯಾಯಿತು. 2015ರಲ್ಲಿ ಅಧ್ಯಕ್ಷ ಪದವಿಯೂ ಒಲಿದು ಬಂದಿತು. ಆದರೆ ಆ ಅವಧಿಯಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನ ಭಾರೀ ಪ್ರಮಾಣದಲ್ಲಿ ಹೋರಾಟ ನಡೆಯಿತು.

ಆಗ ಚುನಾವಣೆಯಲ್ಲಿ ಪ್ರತಿಪಕ್ಷಗಳು ಗೆಲ್ಲಲು ಕಾರಣವಾಯಿತಾದರೂ, ಅಧಿಕಾರವನ್ನು ನಿಕೋಲಸ್ ಬಿಟ್ಟುಕೊಡಲಿಲ್ಲ. ಸುಪ್ರೀಂ ಟ್ರಿಬ್ಯುನಲ್, ನ್ಯಾಷನಲ್ ಎಲೆಕ್ಟೊರಲ್ ಕೌನ್ಸಿಲ್ ಮತ್ತು ಸೇನೆ ಮೂಲಕ ಅಧಿಕಾರದಲ್ಲೇ ಉಳಿದುಕೊಂಡರು. 2017ರಲ್ಲಿ ಇನ್ನೊಂದು ಸುತ್ತಿನ ಪ್ರತಿಭಟನೆ ದೇಶಾದ್ಯಂತ ನಡೆಯಿತು. 2018ರಲ್ಲಿ ಮರು ಆಯ್ಕೆಯಾದ ನಿಕೋಲಸ್ ಅಧಿಕಾರದಲ್ಲೇ ಮುಂದುವರಿದರು. 2024ರ ಚುನಾವಣೆಯಲ್ಲೂ ತಾವೇ ಗೆದ್ದಿರುವುದಾಗಿ ಪ್ರಕಟಿಸಿದರು.

ಹೀಗೆ ಒಂದು ಕಡೆ ನಿಕೋಲಸ್ ಅಧಿಕಾರದಲ್ಲಿ ಕಚ್ಚಿಕೊಂಡು ಉಳಿದಿದ್ದರೆ, ಇನ್ನೊಂದು ಕಡೆ ಅಮೆರಿಕ ಮತ್ತು ಯೂರೋಪ್ ಒಕ್ಕೂಟ ಪ್ರಚೋದಿತ ಚಳವಳಿಯೂ ನಡೆಯುತ್ತಲೇ ಇತ್ತು. ಈಗ ಕಡೆಗೂ ಅಮೆರಿಕ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಿಕೋಲಸ್ ಬಂಧನ ಮಾಡಿದೆ.

Previous articleಜಗತ್ತಿನ ತೈಲ ಸಾಮ್ರಾಜ್ಯ ದೊರೆಗಳು: ಯಾವ ದೇಶದ ಹತ್ತಿರ ಎಷ್ಟು ತೈಲ ನಿಕ್ಷೇಪ ಇದೆ?