Home Advertisement
Home ಸುದ್ದಿ ವಿದೇಶ US ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೊಸ ಸುಂಕ ಆದೇಶ: ಭಾರತಕ್ಕೆ ಎಷ್ಟು ಹೊರೆ?

US ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೊಸ ಸುಂಕ ಆದೇಶ: ಭಾರತಕ್ಕೆ ಎಷ್ಟು ಹೊರೆ?

0
37

ಟ್ರಂಪ್ ಸುಂಕ ವಿವಾದ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮೇಲೆ ಹೊಸ ತಿರುವು

ನವದೆಹಲಿ: ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳಿಂದ ಆಮದಾಗುವ ಸರಕುಗಳ ಮೇಲೆ ಶೇಕಡಾ 10 ರಷ್ಟು ಹೊಸ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಬೆಳವಣಿಗೆಯಿಂದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

18% ಸುಂಕ ರದ್ದು, ಹೊಸ ಕಾನೂನು ಜಾರಿ: ಈ ತಿಂಗಳ ಆರಂಭದಲ್ಲಿ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ.18 ರಷ್ಟು ಸುಂಕ ಘೋಷಿಸಿತ್ತು. ಆದರೆ Supreme Court of the United States ಟ್ರಂಪ್ ಆಡಳಿತವು ಐಇಇಪಿಎ (International Emergency Economic Powers Act) ಅಡಿಯಲ್ಲಿ ಶಾಂತಿಕಾಲದಲ್ಲಿ ಸುಂಕ ವಿಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.

ಇದನ್ನೂ ಓದಿ: ಭಾರತದ ಮೈಲಿಗಲ್ಲು: ₹3,700 ಕೋಟಿ ಚಿಪ್ ಘಟಕಕ್ಕೆ ಶಿಲಾನ್ಯಾಸ

ಇದಾದ ಬಳಿಕ ಟ್ರಂಪ್ ಅವರು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಅನ್ನು ಅನ್ವಯಿಸಿ ಹೊಸ ಶೇ.10 ರಷ್ಟು ತಾತ್ಕಾಲಿಕ ಸುಂಕ ವಿಧಿಸುವ ಕ್ರಮ ಕೈಗೊಂಡಿದ್ದಾರೆ. ಈ ವಿಧಾನದಡಿ 150 ದಿನಗಳವರೆಗೆ ಗರಿಷ್ಠ 15% ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರವಿದೆ. ಆದರೆ ಕಾಂಗ್ರೆಸ್ ಅನುಮೋದನೆ ಅಗತ್ಯವಾಗಿರುವುದರಿಂದ ಫೆಬ್ರವರಿ 24 ಬಳಿಕ ಈ ಸುಂಕ ಜಾರಿಗೆ ಬರಲಿದೆ.

ಭಾರತಕ್ಕೆ ಎಷ್ಟು ಸುಂಕ? : ಶ್ವೇತಭವನದ ಅಧಿಕಾರಿಗಳ ಪ್ರಕಾರ, ಭಾರತ ಸೇರಿದಂತೆ ಯುಎಸ್ ಜೊತೆ ವ್ಯಾಪಾರ ಒಪ್ಪಂದ ಹೊಂದಿರುವ ಎಲ್ಲಾ ದೇಶಗಳಿಗೆ ತಾತ್ಕಾಲಿಕವಾಗಿ ಶೇ.10 ರಷ್ಟು ಸುಂಕ ವಿಧಿಸಲಾಗುತ್ತದೆ. ಭಾರತಕ್ಕೆ ಈಗಾಗಲೇ ವಿಧಿಸಲಾಗಿದ್ದ 18% ಸುಂಕವನ್ನು ರದ್ದುಗೊಳಿಸಬೇಕಾಗಿರುವುದರಿಂದ, ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಮೂಲ 3.5% ಸುಂಕ ಜೊತೆಗೆ ಸೆಕ್ಷನ್ 122 ಅಡಿಯಲ್ಲಿ 10% ಸುಂಕ ಸೇರಿ ಒಟ್ಟು 13.5% ಸುಂಕ ಅನ್ವಯಿಸಬಹುದೆಂಬ ಲೆಕ್ಕಾಚಾರ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಬಾಕಿಯಿದೆ.

ಇದನ್ನೂ ಓದಿ: AI ಇಂಪ್ಯಾಕ್ಟ್ ಶೃಂಗಸಭೆ: ಭಾರತದ ನಾಯಕತ್ವಕ್ಕೆ ಜಾಗತಿಕ ಮಾನ್ಯತೆ

ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ : ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದ್ದು, ಭಾರತೀಯ ಸರ್ಕಾರದ ನಿಯೋಗವು ಮುಂದಿನ ವಾರ ವಾಷಿಂಗ್ಟನ್ ಡಿಸಿ ಭೇಟಿ ನೀಡಿ ಸ್ಪಷ್ಟನೆ ಪಡೆಯಲಿದೆ. ಆ ಬಳಿಕ ಅಂತಿಮ ನಿರ್ಧಾರ ಹೊರಬರುವ ನಿರೀಕ್ಷೆ ಇದೆ.

ಕೇಂದ್ರದ ಪ್ರತಿಕ್ರಿಯೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಯುಎಸ್ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ವಾಣಿಜ್ಯ ಅಥವಾ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಪ್ರತಿಕ್ರಿಯಿಸಲಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆ ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಭಾರತ–ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೆ ಅದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous articleಕಿತ್ತೂರು ಬಳಿ ಕಾರು ಅಡ್ಡಗಟ್ಟಿ ದರೋಡೆ
Next articleಭಾರತದ ಮೈಲಿಗಲ್ಲು: ₹3,700 ಕೋಟಿ ಚಿಪ್ ಘಟಕಕ್ಕೆ ಶಿಲಾನ್ಯಾಸ