ಕಾಠ್ಮಂಡು: ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಪ್ರಧಾನಿ ಒಲಿ ಶರ್ಮಾ ಸರ್ಕಾರ ವಿರುದ್ಧ ಜನರ ಜನರೇಶನ್ ಝಡ್ ಕ್ರಾಂತಿ ಹಿಂಸೆಗೆ ತಿರುಗಿದೆ. ಪ್ರತಿಭಟನಾಕಾರರು ನೇಪಾಳಿ ಸಂಸತ್ ಆವರಣದ ಸುತ್ತಲೂ ಜಮಾಯಿಸಿ ಗೇಟ್‌ಗಳನ್ನು ಮುರಿಯಲು ಪ್ರಯತ್ನಿಸಿರುವುದೂ ಒಳಗೊಂಡಂತೆ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದು, ಭದ್ರತಾ ಪಡೆಗಳು ಅಶ್ರುವಾಯು, ಜಲಫಿರಂಗಿ ಸೇರಿದಂತೆ ಹಲವಾರು ರೀತಿಯ ಭದ್ರತಾ ಕ್ರಮ ಕೈಗೊಂಡಿವೆ.
ಭದ್ರತಾಪಡೆಗಳ ಗುಂಡಿಗೆ ಕಠ್ಮಂಡುವಿನಲ್ಲಿ 18 ಹಾಗೂ ಇಟಹರಿಯಲ್ಲಿ ಇಬ್ಬರೂ ಸೇರಿದಂತೆ 20 ಜನ ಬಲಿಯಾಗಿದ್ದು 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಠ್ಮಂಡು ಆಸ್ಪತ್ರೆಯಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಾಸಿಗೆ ಹಾಗೂ ರಕ್ತದ ಕೊರತೆ ಉಂಟಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ನಿವಾಸದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆಯಲಾಗಿತ್ತು.
ಆದರೆ ಅಶಾಂತಿಯ ಪರಿಸ್ಥಿತಿ ಕಾರಣ ಹಲವಾರು ಸಚಿವರು ಸಭೆಗೆ ಬರಲು ಸಾಧ್ಯವಾಗದ ಕಾರಣ ಸಭೆ ವಿಫಲವಾಯಿತು. ಈ ನಡುವೆ ಹಿಂಸಾಚಾರ ಉಲ್ಬಣಗೊಳ್ಳಲು ಹಾಗೂ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸದ್ದಕ್ಕೆ ಸರ್ಕಾರವನ್ನು ದೂಷಿಸುತ್ತಿರುವ ಪ್ರತಿಪಕ್ಷಗಳು ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿವೆ.
ರಾಜಧಾನಿ ಕಠ್ಮಂಡು, ಪೋಖರಾ ಹಾಗೂ ಬಿರ್ಗುಂಜ್ ಸೇರಿದಂತೆ ಅನೇಕ ನಗರಗಳಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿರುವುದರಿಂದ ಸೇನೆಯನ್ನು ಕರೆಯಿಸಲಾಗಿದ್ದು ನಾಲ್ಕು ಜಿಲ್ಲೆಗಳಲ್ಲಿ ರಾತ್ರಿ 10ರವರೆಗೆ ಕರ್ಫ್ಯೂ ಹೇರಲಾಗಿದೆ. ಪ್ರತಿಭಟನೆ ಸಮಯದಲ್ಲಿ ಉದ್ರಿಕ್ತ ಜನರ ಗುಂಪು ಭದ್ರತಾ ಸಿಬ್ಬಂದಿ ಮೇಲೆ ಕಲ್ಲುಗಳನ್ನು ತೂರಿದ್ದಲ್ಲದೆ, ಖಾಲಿ ನೀರಿನ ಬಾಟಲಿಗಳನ್ನೂ ಎಸೆದಿದ್ದಾರೆ.
ಆದ್ದರಿಂದ ವಿಧ್ವಂಸಕ ಕೃತ್ಯಗಳನ್ನು ಎಸಗುವವರ ಮೇಲೆ ಗುಂಡು ಹಾರಿಸಲು ಸರ್ಕಾರ ಆದೇಶಿಸಿದೆ. ನೇಪಾಳದ ಪರಿಸ್ಥಿತಿ ಉಲ್ಬಣಿಸಿದ ಕಾರಣ ಗಡಿಭಾಗದಲ್ಲಿ ಭಾರತ ಸಹಸ್ರ ಸೀಮಾ ಬಲ ಪಡೆಯ ಯೋಧರನ್ನು ನಿಯೋಜಿಸಿದೆ.
ನೇಪಾಳದ ಜನರು ಈಗಾಗಲೇ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಹಣದುಬ್ಬರ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಇದರ ನಡುವೆ 26 ಸಾಮಾಜಿಕ ತಾಣಗಳನ್ನು ಸರ್ಕಾರ ನಿಷೇಧಿಸಿರುವುದು ಯುವಕರಲ್ಲಿರುವ ರೋಷದ ಕಿಚ್ಚನ್ನು ಹೆಚ್ಚಿಸಿದೆ.