ಉತ್ತರ ಮೆಕ್ಸಿಕೋದ ಹರ್ಮೊಸಿಲ್ಲೊ ನಗರದಲ್ಲಿರುವ ವಾಲ್ಡೋ ಸೂಪರ್ ಮಾರ್ಕೆಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 23 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಶನಿವಾರ ಸಂಭವಿಸಿದ ಈ ಸ್ಫೋಟದಲ್ಲಿ 11 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಫೋಟದ ಪರಿಣಾಮವಾಗಿ ಅಂಗಡಿಯೊಳಗೆ ವಿಷಕಾರಿ ಅನಿಲ ಹರಡಿದ್ದು, ಹೆಚ್ಚಿನವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿ, “ಮೃತರ ಕುಟುಂಬಗಳು ಮತ್ತು ಗಾಯಾಳುಗಳಿಗೆ ತುರ್ತು ನೆರವು ನೀಡಲು ಬೆಂಬಲ ತಂಡವನ್ನು ಕಳುಹಿಸಲು ನಾನು ಆಂತರಿಕ ಕಾರ್ಯದರ್ಶಿ ರೋಸಾ ಐಸ್ಲಾ ರೊಡ್ರಿಗಸ್ ಅವರಿಗೆ ಸೂಚಿಸಿದ್ದೇನೆ,” ಎಂದು ಹೇಳಿದ್ದಾರೆ.
ಘಟನೆಯ ಮೂಲ ಕಾರಣ ಕುರಿತು ತನಿಖೆ ಪ್ರಾರಂಭವಾಗಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದೆ. ರಕ್ಷಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸ್ಥಳದಲ್ಲಿದ್ದು, ಶೋಧ ಕಾರ್ಯ ಮುಂದುವರೆದಿದೆ.

























