ಮಾಲ್ಡೀವ್ಸ್: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಮಗುಚಿಬಿದ್ದ ದುರಂತದಲ್ಲಿ ರೇಮಂಡ್ ಗ್ರೂಪ್ನ ಅಧ್ಯಕ್ಷ ಗೌತಮ್ ಸಿಂಘಾನಿಯಾ (Gautam Singhania) ಅವರಿಗೆ ಗಾಯಗಳಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ಆತಂಕ ಹುಟ್ಟಿಸಿದೆ.
ಮಾಲ್ಡೀವ್ಸ್ನ ವಿ ಫೆಲಿಧೂ ಪ್ರದೇಶದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದ ಬೋಟ್ ಏಕಾಏಕಿ ಅಲೆಗಳ ಹೊಡೆತಕ್ಕೆ ಒಳಗಾಗಿ ಮಗುಚಿಬಿದ್ದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ರೇಮಂಡ್ ಗ್ರೂಪ್ನ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ರಕ್ಷಿಸಿ ಏರ್ಲಿಫ್ಟ್ ಮೂಲಕ ಮುಂಬಯಿಗೆ ತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಮಾಲ್ಡೀವ್ಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಬೋಟ್ನಲ್ಲಿ ಯುನೈಟೆಡ್ ಕಿಂಗ್ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯರು ಇದ್ದರು. ಅಪಘಾತದ ವೇಳೆ ನಾಲ್ವರು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ಪತ್ತೆಯಾಗಿಲ್ಲ.
ನಾಪತ್ತೆಯಾದವರಲ್ಲಿ ಭಾರತದ ಖ್ಯಾತ ರ್ಯಾಲಿ ಚಾಲಕ ಹರಿ ಸಿಂಗ್ ಹಾಗೂ ಅವರ ಸ್ನೇಹಿತ ಸೇರಿದ್ದಾರೆ ಎಂದು ತಿಳಿದುಬಂದಿದೆ.























