ಬೆಂಗಳೂರು: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಬಯೋಇನೋವೇಶನ್ ಸೆಂಟರ್ (Bangalore Bioinnovation Centre – BBC) ತನ್ನ ಪ್ರಥಮ ಅಂತರರಾಷ್ಟ್ರೀಯ ಶಾಖೆಯನ್ನು ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಲಾ ಟ್ರೋಬ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದೆ. ಈ ಹೊಸ ಕೇಂದ್ರಕ್ಕೆ ‘ಬಿಬಿಸಿ–ಲಾ ಟ್ರೋಬ್ ಐಜಿನೈಟ್ ಲ್ಯಾಬ್’ (BBC–La Trobe iGNITE Lab) ಎಂದು ಹೆಸರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಈ ಕೇಂದ್ರವು ಬೆಂಗಳೂರು–ಮೆಲ್ಬರ್ನ್ ಬಯೋ ಇನೋವೇಶನ್ ವಿನಿಮಯ ಕಾರಿಡಾರ್‌ನ ಆರಂಭವನ್ನು ಸೂಚಿಸುತ್ತದೆ. ಇದು ಕರ್ನಾಟಕದ ಸ್ಟಾರ್ಟ್‌ಅಪ್‌ಗಳು ಮತ್ತು ಆಸ್ಟ್ರೇಲಿಯಾದ ಸಂಶೋಧನಾ ಪರಿಸರದ ನಡುವೆ ನೇರ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ,” ಎಂದು ಹೇಳಿದರು.
ಅವರ ಹೇಳಿಕೆಯ ಪ್ರಕಾರ, ಐಜಿನೈಟ್ ಲ್ಯಾಬ್ ಕರ್ನಾಟಕದ ಬಯೋಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಉನ್ನತ ಮಟ್ಟದ ಸಂಶೋಧನಾ ಸೌಲಭ್ಯಗಳು, ತಜ್ಞರಿಂದ ಮಾರ್ಗದರ್ಶನ, ಜಾಗತಿಕ ಮಾರುಕಟ್ಟೆ ಸಂಪರ್ಕಗಳು ಮತ್ತು ನವೋತ್ಪಾದನೆಗಳನ್ನು ಪರೀಕ್ಷಿಸಿ ವಿಸ್ತರಿಸಲು ಅವಕಾಶ ಒದಗಿಸುತ್ತದೆ. ಇದಲ್ಲದೆ, ಆಸ್ಟ್ರೇಲಿಯಾದ ನವೋತ್ಪಾದಕರು ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಬಯೋಟೆಕ್ ಪರಿಸರದೊಂದಿಗೆ ತೊಡಗಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ.
ಈ ಜಂಟಿ ಉಪಕ್ರಮವು ಕರ್ನಾಟಕದ ಬಯೋ ಇನೋವೇಶನ್ ಶಕ್ತಿಯನ್ನು ಜಗತ್ತಿನ ಮಟ್ಟಿಗೆ ಪ್ರದರ್ಶಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಇದು ಬಿಬಿಸಿಗೆ ಜಾಗತಿಕ ಪಯಣದ ಆರಂಭವನ್ನೂ ಸೂಚಿಸುತ್ತದೆ ಎಂದರು.
ಈ ಪ್ರಯತ್ನದ ಮೂಲಕ ಕರ್ನಾಟಕವು ತನ್ನ ಬಯೋಟೆಕ್ ನವೋತ್ಪಾದನೆಗಳನ್ನು ವಿಶ್ವಕ್ಕೆ ತಲುಪಿಸುವುದರ ಜೊತೆಗೆ ಜಾಗತಿಕ ಸಂಶೋಧನಾ ಪರಿಣತಿಯನ್ನು ರಾಜ್ಯಕ್ಕೆ ತರಲು ಸಜ್ಜಾಗಿದೆ.


























