ನೆಲಮಂಗಲ: ಕೆನಡಾದ ಟೊರೊಂಟೊದಲ್ಲಿ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ (37) ಅವರು ಗುಂಡಿನ ದಾಳಿಗೆ ಬಲಿಯಾಗಿ ಸಾವನ್ನಪ್ಪಿರುವ ಘಟನೆ ಕುಟುಂಬ ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.
ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಿದ್ದ ಚಂದನ್ ಕುಮಾರ್, ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಡ ಸಂಸ್ಕೃತಿ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಕನ್ನಡ ಡಿಂಡಿಮವನ್ನು ವಿದೇಶದಲ್ಲೂ ಸಾರುತ್ತಿದ್ದ ವ್ಯಕ್ತಿಯಾಗಿದ್ದರು.
ಇದನ್ನೂ ಓದಿ: IPL ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಮತಿ: ಗೃಹ ಸಚಿವರ ಸಮಾಲೋಚನೆ
ಘಟನೆಯ ದಿನ ಚಂದನ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತರು ಹತ್ತಾರು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಟೊರೊಂಟೊ ಪೊಲೀಸರು ತನಿಖೆ ಆರಂಭಿಸಿದ್ದು, ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ಚಂದನ್ ಅವರ ಸಾವಿನ ಸುದ್ದಿಯನ್ನು ಟೊರೊಂಟೊ ಪೊಲೀಸರು ದೂರವಾಣಿ ಮೂಲಕ ಪೋಷಕರಿಗೆ ತಿಳಿಸಿದ್ದಾರೆ. ಮೃತ ಚಂದನ್ ಅವರ ತಂದೆ, ನಿವೃತ್ತ ಶಿಕ್ಷಕ ನಂದ ಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ರಾತ್ರಿ 8 ಗಂಟೆಗೆ ಮಗನ ಸಾವಿನ ಸುದ್ದಿ ಬಂತು. ಕಳೆದ ಶುಕ್ರವಾರ ಕೊನೆಯದಾಗಿ ಮಾತನಾಡಿದ್ದೆ. ಕೆಲಸದಿಂದ ರಜೆ ತೆಗೆದುಕೊಂಡು ಬಂದು ಮದುವೆ ಆಗುತ್ತೇನೆ ಎಂದಿದ್ದ. ಈಗ ಏನು ಹೇಳಬೇಕು ಗೊತ್ತಾಗುತ್ತಿಲ್ಲ” ಎಂದು ಭಾವೋದ್ರೇಕ ವ್ಯಕ್ತಪಡಿಸಿದರು.
ಇದನ್ನೂ ಓದಿ: METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್ ಹಿಡಿದು ತೇಜಸ್ವಿ ಪ್ರತಿಭಟನೆ
ಚಂದನ್ ಕುಮಾರ್ ಅವರ ಮೃತದೇಹವನ್ನು ಭಾರತಕ್ಕೆ ಕರೆತಂದು ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ ನಡೆಸುವ ಆಸೆ ಪೋಷಕರಿಗೆ ಇದೆ. ಆದರೆ ಕೆನಡಾದಿಂದ ಮೃತದೇಹವನ್ನು ತರಿಸುವ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗದೇ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಈ ಸಂಬಂಧ ಭಾರತ ಸರ್ಕಾರ ಮತ್ತು ವಿದೇಶಾಂಗ ಇಲಾಖೆ ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.
ಘಟನೆಯಿಂದ ನೆಲಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಪ್ರಕರಣದ ತನಿಖೆಯನ್ನು ಕೆನಡಾ ಪೊಲೀಸರು ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.























