ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ನಾಯಕಿ ಬೇಗಂ ಖಲೇದಾ ಜಿಯಾ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರ ನಿಧನವನ್ನು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಧಿಕೃತವಾಗಿ ಖಚಿತಪಡಿಸಿದೆ.
ವರದಿಗಳ ಪ್ರಕಾರ, ಖಲೇದಾ ಜಿಯಾ ಅವರು ಲಿವರ್ ಸಿರೋಸಿಸ್, ಸಂಧಿವಾತ, ಮಧುಮೇಹ ಹಾಗೂ ಹೃದಯ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಹಲವು ವರ್ಷಗಳಿಂದ ಬಳಲುತ್ತಿದ್ದರು. ವಯೋಸಹಜ ಕಾಯಿಲೆಗಳ ತೀವ್ರತೆ ಹೆಚ್ಚಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರ ನಿಧನದ ಸುದ್ದಿ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಶೋಕವನ್ನು ಮೂಡಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಸರು ಖರೀದಿ ಗಡವು ವಿಸ್ತರಣೆ
ಭಾರತದೊಂದಿಗೆ ನಂಟು ಹೊಂದಿದ್ದ ನಾಯಕಿ: ಖಲೇದಾ ಜಿಯಾ ಅವರು 1945ರಲ್ಲಿ ಬ್ರಿಟಿಷ್ ಭಾರತದ ಬಂಗಾಳ ಪ್ರೆಸಿಡೆನ್ಸಿಯ ಅವಿಭಜಿತ ದಿನಾಜ್‌ಪುರ ಜಿಲ್ಲೆಯಲ್ಲಿ (ಈಗ ಭಾರತದ ಪಶ್ಚಿಮ ಬಂಗಾಳದ ಜಿಗುರಿ ಪ್ರದೇಶ) ಜನಿಸಿದ್ದರು. ಹೀಗಾಗಿ ಅವರಿಗೆ ಭಾರತದೊಂದಿಗೆ ಸಹ ಆಪ್ತ ನಂಟಿತ್ತು. ದೇಶ ವಿಭಜನೆಯ ನಂತರ ಖಲೇದಾ ಮತ್ತು ಅವರ ಕುಟುಂಬ ದಿನಾಜ್‌ಪುರ ಪಟ್ಟಣಕ್ಕೆ (ಈಗಿನ ಬಾಂಗ್ಲಾದೇಶ) ವಲಸೆ ಬಂದಿದ್ದರು.
ರಾಜಕೀಯ ಜೀವನದ ಆರಂಭ: ಖಲೇದಾ ಜಿಯಾ ಅವರು 1960ರಲ್ಲಿ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದ ಜಿಯಾವುರ್ ರೆಹಮಾನ್ ಅವರನ್ನು ವಿವಾಹವಾಗಿದ್ದರು. 1981ರಲ್ಲಿ ಜಿಯಾವುರ್ ರೆಹಮಾನ್ ಅವರ ಹತ್ಯೆಯ ನಂತರ, ಖಲೇದಾ ರಾಜಕೀಯದಲ್ಲಿ ಸಕ್ರಿಯರಾಗಿದರು. ಅದೇ ವರ್ಷ ಅವರು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ಸಾಮಾನ್ಯ ಸದಸ್ಯೆಯಾಗಿ ಸೇರಿದರು. 1983ರಲ್ಲಿ ಪಕ್ಷದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಅವರು, ಒಂದು ವರ್ಷದ ನಂತರ ಬಿಎನ್‌ಪಿಯ ಅಧ್ಯಕ್ಷೆಯಾಗಿ ಪಕ್ಷದ ನೇತೃತ್ವ ವಹಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ
ಸೇನಾ ಆಡಳಿತ ವಿರೋಧಿ ಹೋರಾಟ: 1983ರಲ್ಲಿ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ಹುಸೇನ್ ಮುಹಮ್ಮದ್ ಎರ್ಷಾದ್ ಅವರ ಆಡಳಿತವನ್ನು ಕೊನೆಗೊಳಿಸಲು ಏಳು ಪಕ್ಷಗಳ ಮೈತ್ರಿಕೂಟವನ್ನು ರಚಿಸುವಲ್ಲಿ ಖಲೇದಾ ಜಿಯಾ ಪ್ರಮುಖ ಪಾತ್ರ ವಹಿಸಿದ್ದರು. ಈ ಹೋರಾಟವೇ ಮುಂದೆ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು.
ಮೂರು ಬಾರಿ ಪ್ರಧಾನಮಂತ್ರಿ: 1991ರಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ಖಲೇದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಅವರು 1991–1996, 1996 (12 ದಿನಗಳ ಕಾಲ) ಮತ್ತು 2001–2006 ಅವಧಿಗಳಲ್ಲಿ ಮೂರು ಬಾರಿ ಪ್ರಧಾನಮಂತ್ರಿಯಾಗಿ ದೇಶವನ್ನು ಆಡಳಿತ ನಡೆಸಿದರು.
ರಾಷ್ಟ್ರೀಯತೆ, ಮಿಲಿಟರಿ ವ್ಯವಸ್ಥೆ ಹಾಗೂ ಆಡಳಿತ ಯಂತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಖಲೇದಾ ಜಿಯಾ ಪ್ರಯತ್ನಿಸಿದ್ದರು. ಭಾರತ–ಬಾಂಗ್ಲಾದೇಶ ಸಂಬಂಧಗಳಲ್ಲಿಯೂ ಅನೇಕ ಮಹತ್ವದ ನಿರ್ಧಾರಗಳನ್ನು ಅವರು ಕೈಗೊಂಡಿದ್ದರು.
ಇದನ್ನೂ ಓದಿ: INSV Kaundinya: ಓಮನ್‌ಗೆ ಪ್ರಯಾಣ ಬೆಳೆಸಿದ ನೌಕಾಪಡೆಯ ಹಡಗು
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಖಲೇದಾ ಜಿಯಾ ಅವರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಖಲೇದಾ ಜಿಯಾ ಅವರ ಪಾತ್ರ ಅತಿ ಮಹತ್ವದ್ದಾಗಿದ್ದು, ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಬೇಗಂ ಖಲೇದಾ ಜಿಯಾ ಅವರು ಸದಾ ಧೈರ್ಯಶಾಲಿ ನಾಯಕಿ, ಪ್ರಜಾಪ್ರಭುತ್ವದ ಪರ ಹೋರಾಡಿದ ಶಕ್ತಿಶಾಲಿ ಮಹಿಳೆ ಎಂಬ ಹೆಸರಿನಲ್ಲಿ ನೆನಪಾಗಲಿದ್ದಾರೆ.






















