ನವದೆಹಲಿ: ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರು ತಮ್ಮ ಜೀವನದ ಅತ್ಯಂತ ದುಃಖಕರ ಕ್ಷಣದಲ್ಲಿ ಮಾನವೀಯತೆ ತುಂಬಿದ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಅಮೆರಿಕದಲ್ಲಿ ತಮ್ಮ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರ ಅಕಾಲಿಕ ನಿಧನದ ನಂತರ, ತಮ್ಮ ಒಟ್ಟು ಸಂಪತ್ತಿನ ಶೇ.75ಕ್ಕಿಂತ ಹೆಚ್ಚಿನ ಪಾಲನ್ನು ಸಮಾಜ ಸೇವೆಗೆ ದಾನ ಮಾಡುವುದಾಗಿ ಈ ಹಿಂದೆ ನೀಡಿದ್ದ ವಾಗ್ದಾನವನ್ನು ಅವರು ಪುನರುಚ್ಚರಿಸಿದ್ದಾರೆ.
ಅಗ್ನಿವೇಶ್ ಅಗರ್ವಾಲ್ ಅವರು ಅಮೆರಿಕದಲ್ಲಿ ಸ್ಕೀಯಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ನ್ಯೂಯಾರ್ಕ್‌ನ ಪ್ರಸಿದ್ಧ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಕೆಯ ಹಾದಿಯಲ್ಲಿದ್ದರು. ವೈದ್ಯರು ಕೂಡ ಅಪಾಯದಿಂದ ಪಾರಾಗಿದ್ದಾರೆ ಎಂಬ ಭರವಸೆ ನೀಡಿದ್ದ ಸಂದರ್ಭದಲ್ಲೇ, ವಿಧಿಯ ಕ್ರೂರತೆಯಂತೆ ಹಠಾತ್ ಹೃದಯಾಘಾತ ಸಂಭವಿಸಿ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಘಟ್ಟದ ಧ್ವನಿ ಮೌನ: ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ
“ಇದು ನನ್ನ ಜೀವನದ ಅತ್ಯಂತ ಕತ್ತಲ ದಿನ” – ಅನಿಲ್ ಅಗರ್ವಾಲ್: ಈ ನೋವಿನ ಬಗ್ಗೆ ಅನಿಲ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕತೆಯ ಪೋಸ್ಟ್ ಹಂಚಿಕೊಂಡಿದ್ದು “ಇದು ನನ್ನ ಜೀವನದ ಅತ್ಯಂತ ಕತ್ತಲ ದಿನ. ತಂದೆಯೊಬ್ಬ ತನ್ನ ಮಗನಿಗೆ ಅಂತಿಮ ವಿದಾಯ ಹೇಳುವ ನೋವನ್ನು ವಿವರಿಸಲು ಪದಗಳೇ ಸಾಲದು. ತಂದೆಗಿಂತ ಮುಂಚೆ ಮಗ ಹೋಗಬಾರದು. ಆದರೆ ಈ ನಷ್ಟ ನಮ್ಮನ್ನು ಸಂಪೂರ್ಣವಾಗಿ ಝರ್ಝರಿತಗೊಳಿಸಿದೆ,” ಎಂದು ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಅಭಿವೃದ್ಧಿಯ ಕನಸು ಕಂಡ ಮಗ: ಮಗ ಅಗ್ನಿವೇಶ್ ಕುರಿತು ಸ್ಮರಿಸಿಕೊಂಡ ಅನಿಲ್ ಅಗರ್ವಾಲ್, ಅವರು ಸದಾ ಭಾರತದ ಅಭಿವೃದ್ಧಿಯ ಬಗ್ಗೆ ಕನಸು ಕಾಣುತ್ತಿದ್ದ ವ್ಯಕ್ತಿ ಎಂದು ಹೇಳಿದ್ದಾರೆ. “ಭಾರತ ಯಾವುದರಲ್ಲೂ ಹಿಂದೆ ಬೀಳಬಾರದು. ನಮ್ಮ ದೇಶ ಸ್ವಾವಲಂಬಿಯಾಗಬೇಕು ಎಂಬುದು ಅಗ್ನಿವೇಶ್‌ನ ನಂಬಿಕೆ. ಯಾವುದೇ ಮಗು ಹಸಿವಿನಿಂದ ಮಲಗಬಾರದು, ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಕನಸನ್ನು ನಾವಿಬ್ಬರೂ ಹಂಚಿಕೊಂಡಿದ್ದೆವು,” ಎಂದು ಅವರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ದುಂದು ವೆಚ್ಚದ ವಿವಾಹಗಳಿಗೆ ಬ್ರೇಕ್: ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹ
ಸಮಾಜಕ್ಕೆ ಸಂಪತ್ತನ್ನು ಹಿಂತಿರುಗಿಸುವ ಸಂಕಲ್ಪ: ಈ ಮೌಲ್ಯಗಳೇ ತಮ್ಮ ಜೀವನದ ದಿಕ್ಕನ್ನು ನಿರ್ಧರಿಸಿವೆ ಎಂದು ಹೇಳಿರುವ ಅನಿಲ್ ಅಗರ್ವಾಲ್, ತಾವು ಗಳಿಸಿದ ಸಂಪತ್ತಿನಲ್ಲಿ ಮುಕ್ಕಾಲು ಭಾಗವನ್ನು ಸಮಾಜಕ್ಕೆ ಹಿಂತಿರುಗಿಸುವುದಾಗಿ ಈ ಹಿಂದೆ ಮಗನಿಗೆ ಮಾತು ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ. ಇದೀಗ ಮಗನ ಅಗಲಿಕೆಯ ನಂತರವೂ, ಆ ಮಾತಿಗೆ ತಾವು ಸಂಪೂರ್ಣವಾಗಿ ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.
ಇನ್ನುಮುಂದೆ ತಾವು ಇನ್ನಷ್ಟು ಸರಳ ಜೀವನ ನಡೆಸುವುದಾಗಿ ಮತ್ತು ಸಮಾಜ ಸೇವೆಯ ಮೂಲಕ ಮಗನ ಕನಸುಗಳನ್ನು ಜೀವಂತವಾಗಿಡುವುದಾಗಿ ಅವರು ಹೇಳಿದ್ದಾರೆ. “ಅಗ್ನಿವೇಶ್‌ನ ನೆನಪು ಮತ್ತು ಆತ ಸಮಾಜದ ಮೇಲೆ ಬೀರಿದ ಪ್ರಭಾವ ಸದಾ ನಮ್ಮ ಜೊತೆಯಲ್ಲೇ ಇರುತ್ತದೆ,” ಎಂದು ಅನಿಲ್ ಅಗರ್ವಾಲ್ ಭಾವುಕವಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತಲ್ಲಣಿಸಿದ ಸಹ್ಯಾದ್ರಿ ಕೊಳ್ಳದ ನಡುವೆ ಸಂತ-ಜನ…!
ಪ್ರಧಾನಮಂತ್ರಿ ಮೋದಿ ಸಂತಾಪ: ಅಗ್ನಿವೇಶ್ ಅಗರ್ವಾಲ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ಕುಟುಂಬದ ದುಃಖಕ್ಕೆ ತಮ್ಮ ಆಳವಾದ ಸಂತಾಪಗಳನ್ನು ತಿಳಿಸಿದ್ದಾರೆ.
ಲೋಕೋಪಕಾರದ ದಾರಿಯಲ್ಲಿ ವೇದಾಂತ ಮುಖ್ಯಸ್ಥ: ವೇದಾಂತ ಸಮೂಹದ ಮುಖ್ಯಸ್ಥರಾದ ಅನಿಲ್ ಅಗರ್ವಾಲ್ ಅವರು ಈ ಹಿಂದೆಯೂ ಹಲವು ಬಾರಿ ತಮ್ಮ ಸಂಪತ್ತಿನ ಬಹುಪಾಲನ್ನು ಲೋಕೋಪಕಾರ ಮತ್ತು ಸಮಾಜ ಕಲ್ಯಾಣಕ್ಕೆ ಮೀಸಲಿಡುವ ಬಗ್ಗೆ ಮಾತನಾಡಿದ್ದರು. ಇದೀಗ ಪುತ್ರ ಶೋಕದ ನಡುವೆಯೂ ಆ ನಿರ್ಧಾರಕ್ಕೆ ಬದ್ಧರಾಗಿರುವುದು ದೇಶದಾದ್ಯಂತ ಗಮನ ಸೆಳೆದಿದ್ದು, ಹಲವರಿಂದ ಪ್ರಶಂಸೆ ವ್ಯಕ್ತವಾಗಿದೆ.























