ಟ್ರಂಪ್ ಆಡಳಿತ ಬಗ್ಗೆ ಅಮೆರಿಕನ್ನರಲ್ಲೇ ಅತೃಪ್ತಿ

0
24

ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ವ್ಯಾಪಾರ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕನ್ನರಲ್ಲೇ ಅಸಮಾಧಾನ ಉಂಟಾಗಿದೆ. ಅಧ್ಯಕ್ಷ ಟ್ರಂಪ್ ದೇಶದ ಪ್ರಮುಖ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಲ್ಲಿನ ಜನ ದೂರಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಯುದ್ಧ ಸೇರಿದಂತೆ 11 ಯುದ್ಧಗಳಲ್ಲಿ ತಮ್ಮ ಆಡಳಿತ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿಕೊಳ್ಳುವ ಟ್ರಂಪ್ ಅಮರಿಕದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಸೋತಿದ್ದಾರೆ ಎಂಬುದು ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹಾಗಿದ್ದರೇ ಯಾವೆಲ್ಲಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಟ್ರಂಪ್ ವಿಫಲರಾದರು, ಅವರ ಆಡಳಿತದ ಬಗ್ಗೆ ಅಲ್ಲಿನ ಜನರ ಅಭಿಪ್ರಾಯವೇನು ಎಂಬುದರ ಮಾಹಿತಿ ಇಲ್ಲಿದೆ…

ಅಪರಾಧ ಪ್ರಕರಣಗಳ ತಡೆಗೆ ವಿಫಲ: ಕಳೆದ ವರ್ಷದ ಜನವರಿಯಲ್ಲಿ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೂ ರಷ್ಯಾ-ಉಕ್ರೇನ್ ಯುದ್ಧ, ಗಾಜಾ-ಇಸ್ರೇಲ್ ಯುದ್ಧ ಹಾಗೂ ಅಮೆರಿಕದ ವಲಸೆ ನೀತಿ ಸೇರಿದಂತೆ ಅಪರಾಧ ಪ್ರಕರಣಗನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆಯಾಗಿ ಟ್ರಂಪ್ ಆಡಳಿತವೇ ಕಳಪೆ ಎಂದು ಶೇ. 54ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ಚುನಾವಣೆ ಮೇಲೆ ಪರಿಣಾಮ?: ಸಮೀಕ್ಷೆಯ ಪ್ರಕಾರ, ಟ್ರಂಪ್ ತಮಗೆ ತೋಚಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಅಮೆರಿಕದ ಯುವಕರಲ್ಲಿ ಅಸಮಾಧಾನ ಉಂಟಾಗಿದೆ. ಹೀಗಾಗಿ ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ಶೇ.53ರಷ್ಟು ಯುವಕರು ಡೆಮಾಕ್ರಟಿಕ್ ಪಕ್ಷಕ್ಕೆ ಮತ ಚಲಾಯಿಸುವುದಾಗಿ ಹೇಳಿಕೊಂಡಿರುವುದರಿಂದ ಟ್ರಂಪ್ ಗಂಭೀರವಾಗಿ ಪರಿಗಣಿಸಬೇಕೆಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಎಲ್ಲೆಲ್ಲಿ ಟ್ರಂಪ್ ವಿಫಲರಾಗಿದ್ದಾರೆ..?: ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಮತ್ತು ಇಪ್ಸೋಸ್ ಸೆಪ್ಟೆಂಬರ್ 11 ರಿಂದ 15ರವರೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಒಟ್ಟಾರೆಯಾಗಿ ಶೇ. 43ರಷ್ಟು ಜನ ಟ್ರಂಪ್ ಆಡಳಿತಕ್ಕೆ ಬಹುಪರಾಕ್ ಹಾಕಿದ್ದರೆ, ಇನ್ನು ಶೇ. 56ರಷ್ಟು ಜನ ಟ್ರಂಪ್ ಆಡಳಿತ ಕಳಪೆಯಿಂದ ಕೂಡಿತ್ತು ಎಂದಿದ್ದಾರೆ. ಹೆಚ್ಚಿನ ಜನತೆ ಅಧ್ಯಕ್ಷ ಟ್ರಂಪ್ ಆರ್ಥಿಕತೆ, ವಿದೇಶಿ ಯುದ್ಧಗಳ ನಿರ್ವಹಣೆ, ವ್ಯಾಪಾರ ಸುಂಕ, ಅಪರಾಧ ಸೇರಿ ದಂತೆ ಹಲವು ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.

ಅಪರಾಧ: ಅಮೆರಿಕದಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಟ್ರಂಪ್ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಶೇ. 44ರಷ್ಟು ಜನ ಅಭಿಪ್ರಾಯಪಟ್ಟರೆ, ಶೇ. 54ರಷ್ಟು ಜನ ಟ್ರಂಪ್ ವಿಫರಾಗಿದ್ದಾರೆ ಎಂದಿದ್ದಾರೆ.

ವಲಸೆ ನೀತಿ: ದೇಶಕ್ಕೆ ಹೊರದೇಶಗಳಿಂದ ವಲಸಿಗರು ಹೆಚ್ಚಾಗಿ ಬರುತ್ತಿದ್ದು, ಈ ಸಂಬಂಧ ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ ಎಂದು ಶೇ. 44ರಷ್ಟು ಜನತೆ ಹೇಳಿದರೆ, ಇನ್ನುಳಿದ ಶೇ.55ರಷ್ಟು ಜನತೆ ವಲಸೆ ನೀತಿ ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದಾರೆ ಎಂದಿದ್ದಾರೆ.

ಆರ್ಥಿಕತೆ: ಟ್ರಂಪ್ ಆಡಳಿತಕ್ಕೆ ಬಂದಮೇಲೆ ಹಣದುಬ್ಬರ ಏರುಗತಿಯಲ್ಲಿದೆ. ಆರ್ಥಿಕ ವಿಷಯಗಳಲ್ಲಿ ಟ್ರಂಪ್ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶೇ. 39ರಷ್ಟು ಜನ ಹೇಳಿದರೆ, ಶೇ. 60ರಷ್ಟು ಜನತೆ ಟ್ರಂಪ್‌ರಿಂದಾಗಿ ಆರ್ಥಿಕತೆ ಕುಸಿದಿದೆ ಎಂದಿದ್ದಾರೆ.

ವಿದೇಶಿ ಯುದ್ಧ: ಭಾರತ್-ಪಾಕ್ ಯುದ್ಧ ಸೇರಿ 11 ಯುದ್ಧಗಳನ್ನು ಮಧ್ಯಸ್ಥಿಕೆ ವಹಿಸಿದ್ದೇನೆಂದು ಹೇಳಿಕೊಳ್ಳುವ ಟ್ರಂಪ್ ಈ ವಿಷಯದಲ್ಲಿ ಸರಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶೇ. 60ರಷ್ಟು ಜನತೆ ಹೇಳಿದ್ದಾರೆ.

Previous articleಏಷ್ಯಾಕಪ್‌ ಕ್ರಿಕೆಟ್‌: ಭಾರತ- ಪಾಕ್ ಮತ್ತೆ ಮುಖಾಮುಖಿ
Next articleಕೋಚಿಂಗ್‌ಗೆ ಹೋದರೆ ಪರೀಕ್ಷೆಗೆ ಬರಲೇಬೇಡಿ: ಹೈಕೋರ್ಟ್ ನಿರ್ದೇಶನ

LEAVE A REPLY

Please enter your comment!
Please enter your name here