ಶಿಕ್ಷಕರಾಗಿ ಉಳಿಯಲು, ಬಡ್ತಿಗೆ ಟಿಇಟಿ ಕಡ್ಡಾಯ. 5 ವರ್ಷಗಳು ಬಾಕಿ ಇರುವ ಶಿಕ್ಷಕರಿಗೆ ಪರಿಹಾರ ನೀಡಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಬೋಧನಾ ಸೇವೆಯಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಮುಂದುವರಿಯಲು ಟಿಇಟಿಯನ್ನು (2025 ರಿಂದ) ಪಾಸ್ ಮಾಡಬೇಕೆಂಬ ಮಹತ್ವದ ತೀರ್ಪನ್ನು ಕೋರ್ಟ್ ನೀಡಿದೆ.
ಶಿಕ್ಷಕರಾಗಿ ಮುಂದುವರೆಯಲು, ಬಡ್ತಿ ಹೊಂದಲು ಕಡ್ಡಾಯ ಜತೆಗೆ ಟಿಇಟಿ ಪರೀಕ್ಷೆಯನ್ನು ಪರಿಚಯಿಸುವುದಕ್ಕಿಂತ ಮುಂಚೆಯೇ ಶಿಕ್ಷಕರಾಗಿರುವವರಿಗೂ ಈ ತೀರ್ಮಾನ ಅನ್ವಯಿಸಲಿದೆ. ಅಂಜುಮನ್ ಇಶಾತ್-ಎ-ತಲೀಮ್ ಟ್ರಸ್ಟ್ V/S ಸ್ಟೇಟ್ ಆಫ್ ಮಹಾರಾಷ್ಟ್ರ ಮತ್ತು ಇತರ ಪ್ರಕರಣದಲ್ಲಿ ಕೋರ್ಟ್ ಈ ತೀರ್ಪನ್ನು ನೀಡಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ನಿವೃತ್ತಿ ವಯಸ್ಸಿಗೆ ಕೇವಲ ಐದು ವರ್ಷಗಳು ಬಾಕಿ ಇರುವ ಶಿಕ್ಷಕರಿಗೆ ಪರಿಹಾರ ನೀಡಿ, ಅವರು ಸೇವೆಯಲ್ಲಿ ಮುಂದುವರಿಯಬಹುದು ಎಂದು ನಿರ್ದೇಶಿಸಿತು. ಐದು ವರ್ಷಗಳಿಗಿಂತ ಹೆಚ್ಚು ಸೇವಾವಧಿ ಹೊಂದಿರುವ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಟಿಇಟಿಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂದು ಪೀಠ ಹೇಳಿದೆ. ಇಲ್ಲದಿದ್ದರೆ, ಅವರು ಸೇವೆಯನ್ನು ತೊರೆಯಬಹುದು ಅಥವಾ ಅಂತಿಮ ಪ್ರಯೋಜನಗಳೊಂದಿಗೆ ಕಡ್ಡಾಯ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು.
ಈ ತೀರ್ಪಿನ ಹಿನ್ನಲೆಯೇನು?: ವಾಸ್ತವವಾಗಿ, ರಾಜ್ಯವು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಟಿಇಟಿ ಕಡ್ಡಾಯಗೊಳಿಸಬಹುದೇ ಮತ್ತು ಅದು ಅವರ ಹಕ್ಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವ ವಿಷಯ ಸಮಸ್ಯೆಯಾಗಿ ಉಳಿದಿತ್ತು. ಆದ್ದರಿಂದ, ಈ ಕುರಿತು ವಿಚಾರಣೆಗಾಗಿ ಕೆಳ ನ್ಯಾಯಾಲಯಗಳು ದೊಡ್ಡ ಪೀಠಕ್ಕೆ ಉಲ್ಲೇಖಿಸಿದ್ದವು. ಬೋಧನಾ ಸೇವೆಗೆ ಟಿಇಟಿ ಕಡ್ಡಾಯವೇ ಎಂಬ ವಿಷಯಕ್ಕೆ ಸಂಬಂಧಿಸಿದ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳ ಮೇಲೆ ನ್ಯಾಯಾಲಯವು ಈ ತೀರ್ಪು ನೀಡಿದೆ.
2010ರಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE) ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಶಿಕ್ಷಕರಾಗಿ ನೇಮಕಗೊಳ್ಳಲು ಅರ್ಹರಾಗಲು ಕೆಲವು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿತ್ತು. ಇದಾದ ನಂತರ, NCTE TET ಪರಿಚಯಿಸಿತು.
ಅರ್ಜಿ ಆಲಿಸಲು ಸುಪ್ರೀಂ ಸಿದ್ದ: ಮತ್ತೊಂದೆಡೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿ ಮಾಡುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು.
ಈ ಸಂಬಂಧ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಅವರ ಪೀಠವು ಅರ್ಜಿದಾರರಿಂದ ಪ್ರತಿಕ್ರಿಯೆ ಕೋರಿತು ಮತ್ತು ಪ್ರಕರಣದ ವಿಚಾರಣೆಯನ್ನು 4 ವಾರಗಳ ನಂತರ ನಿಗದಿಪಡಿಸಿತು.
2024-25ನೇ ಶೈಕ್ಷಣಿಕ ವರ್ಷಕ್ಕೆ ಆರ್‌ಟಿಇ ಕಾಯ್ದೆಯಡಿ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯ ಕುರಿತು ಜೂನ್ 10ರಂದು ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿತ್ತು.